‘ಫೌಂಡೇಷನ್ ವ್ಯಾಪ್ತಿ ಜಿಲ್ಲೆಗೆ ವಿಸ್ತರಣೆ’

7
ಜೆಡಿಎಸ್ ಜಿಲ್ಲಾ ಘಟಕ: ನೂತನ ಅಧ್ಯಕ್ಷರಾಗಿ ನವಲಿಹಿರೇಮಠ ಅಧಿಕಾರ ಸ್ವೀಕಾರ

‘ಫೌಂಡೇಷನ್ ವ್ಯಾಪ್ತಿ ಜಿಲ್ಲೆಗೆ ವಿಸ್ತರಣೆ’

Published:
Updated:
ಬಾಗಲಕೋಟೆಯಲ್ಲಿ ಭಾನುವಾರ ಜೆಡಿಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಸ್.ಆರ್.ನವಲಿಹಿರೇಮಠ ಮಾತನಾಡಿದರು

ಬಾಗಲಕೋಟೆ: ‘ಹುನಗುಂದ ತಾಲ್ಲೂಕಿಗೆ ಮಾತ್ರ ಮೀಸಲಾಗಿದ್ದ ಎಸ್‌ಆರ್‌ಎನ್‌ಇ ಫೌಂಡೇಷನ್ ಸಾಮಾಜಿಕ ಚಟುವಟಿಕೆಗಳನ್ನು ಇನ್ನು ಮುಂದೆ ಜಿಲ್ಲೆಯಾದ್ಯಂತ ವಿಸ್ತರಣೆ ಮಾಡುವುದಾಗಿ’ ಘೋಷಿಸಿದ ಜೆಡಿಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ, ‘ಪಕ್ಷ ಸಂಘಟನೆಗೆ ಕೂಡಲಸಂಗಮನಾಥನ ಆಣೆಗೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಹೇಳಿದರು.

ಇಲ್ಲಿನ ಕಲಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಅಧ್ಯಕ್ಷ ರವಿ ಹುಣಶ್ಯಾಳ ಅವರಿಂದ ಪಕ್ಷದ ಧ್ವಜ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದ ನವಲಿಹಿರೇಮಠ, ‘ಗುತ್ತಿಗೆದಾರನಾಗಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದೆ. ಎಲ್ಲಾ ಪಕ್ಷಗಳಲ್ಲೂ ನನಗೆ ಗೆಳೆಯರಿದ್ದಾರೆ. ಆದರೆ ಕೆಲವು ಆತ್ಮೀಯ ಗೆಳೆಯರು ರಾಜಕೀಯಕ್ಕೆ ಬರಲು ಒತ್ತಾಯಿಸಿದರೂ ನಾನು ಒಪ್ಪಿರಲಿಲ್ಲ. ಆದರೆ ನನ್ನ ತಾಲ್ಲೂಕಿನ ದುಸ್ಥಿತಿ, ಅಲ್ಲಿನ ರಾಜಕೀಯ ವ್ಯವಸ್ಥೆ ಹಾಗೂ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಗಮನಿಸಿ ಕೊನೆಯ ಗಳಿಗೆಯಲ್ಲಿ ರಾಜಕೀಯಕ್ಕೆ ಬರಲು ನಿರ್ಧರಿಸಿದೆ’ ಎಂದು ಹೇಳಿದರು.

ಬಾಲ್ಯದಲ್ಲಿಯೇ ಬಡತನ ಅನುಭವಿಸಿರುವ ಕಾರಣ ಜನಸಾಮಾನ್ಯರ ಸಂಕಷ್ಟ ನನಗೆ ಗೊತ್ತಿದೆ. ಹಾಗಾಗಿ ದುಡಿಮೆಯ ಒಂದು ಪಾಲನ್ನು ಫೌಂಡೇಷನ್ ಮೂಲಕ ಅವರ ಸೇವೆಗೆ ಮೀಸಲಿಟ್ಟಿದ್ದೇನೆ. ಇನ್ನು ಮುಂದೆ ತಿಂಗಳಿಗೊಮ್ಮೆ ಪ್ರತಿ ಮತ ಕ್ಷೇತ್ರಕ್ಕೆ ಭೇಟಿ ನೀಡಿ, ಕಾರ್ಯಕರ್ತರ ಅಳಲು ಆಲಿಸುವೆ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 1 ಲಕ್ಷ ಜನರಾದರೂ ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಪಡೆಯುವಂತೆ ಮಾಡಲಾಗುವುದು ಎಂದರು.

ಶೀಘ್ರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜಿಲ್ಲೆಗೆ ಕರೆತಂದು ಅಭಿನಂದನಾ ಸಮಾರಂಭ ಮಾಡಲಾಗುವುದು. ಈ ವೇಳೆ ಅವರಿಗೆ ಇಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಲಾಗುವುದು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೂ ಪಕ್ಷವನ್ನು ಸಜ್ಜುಗೊಳಿಸುವುದಾಗಿ ಹೇಳಿದರು.

ಉತ್ತರ ಕರ್ನಾಟಕಕ್ಕೆ ಜೆಡಿಎಸ್‌ ಏನು ಕೊಡುಗೆ ಕೊಟ್ಟಿದೆ ಎಂದು ಕೇಳುತ್ತಿದ್ದೀರಿ, ಕೇಂದ್ರದಲ್ಲಿ ನಿಮ್ಮ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಕೊಡುಗೆಯೇನು ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ಶಕ್ತಿ ಕೊಟ್ಟವರು ದೇವೇಗೌಡರು ಎಂದರು. ಚುನಾವಣೆ ವೇಳೆ ಮಹಾದಾಯಿ ವಿವಾದವನ್ನು ನಾಳೆಯೇ ಪರಿಹರಿಸುವ ರೀತಿ ಮಾತಾಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗೇಕೆ ಆ ಬಗ್ಗೆ ಮಾತಾಡುತ್ತಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಮುಖಂಡ ಘನಶ್ಯಾಂ ಭಾಂಡಗೆ, ‘ಚುನಾವಣೆಗೂ ಮುನ್ನ ಜೆಡಿಎಸ್ ಕಿಂಗ್ ಆಗೊಲ್ಲ, ಕಿಂಗ್ ಮೇಕರೂ ಆಗೊಲ್ಲ ಎಂದು ಕೆಲವರು ಲೇವಡಿ ಮಾಡುತ್ತಿದ್ದರು. ಈಗ ನಾವು ಕಿಂಗ್ ಹಾಗೂ ಕಿಂಗ್‌ ಮೇಕರ್ ಎರಡೂ ಆಗಿದ್ದೇವೆ. ಪಕ್ಷ ಸಂಘಟನೆಗೆ ಇದು ಸೂಕ್ತ ಕಾಲ. ನಾಯಕರು, ಮುಖಂಡರು ಎಂಬ ಪ್ರತಿಷ್ಠೆ ಮರೆತು ಸಾಮಾನ್ಯ ಕಾರ್ಯಕರ್ತರಾಗಿ ಎಲ್ಲರೂ ಕೈ ಜೋಡಿಸೋಣ’ ಎಂದು ಹೇಳಿದರು.

‘ಪಕ್ಷ ತಾಯಿ ಇದ್ದಂತೆ. ಅದಕ್ಕೆ ಮೋಸ ಮಾಡುವುದು ಸಲ್ಲ. ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎಲ್ಲರಿಗೂ ಅವಕಾಶ ಸಿಗಲಿದೆ. ನಾಯಕರೂ ಗುರುತಿಸಲಿದ್ದಾರೆ’ ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್‌ ಮೋಯಿದ್ ಅಲ್ತಾಫ್‌, ರಾಜ್ಯ ಘಟಕದ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಮುಖಂಡರಾದ ಹನುಮಂತ ಮಾವಿನಮರದ, ಪ್ರೊ.ಬಸವರಾಜ ಕೊಣ್ಣೂರ, ಸದಾಶಿವ ಕಲಾಲ, ಶರಣು ಹುರಕಡ್ಲಿ, ರಮೇಶ ಬದನೂರ, ಶಿವಪ್ರಸಾದ ಗದ್ದಿ, ಆರ್.ಕೆ.ಪಾಟೀಲ, ಚಂದ್ರಕಾಂತ ಹಿರೇಮಠ, ಸಂಗಪ್ಪ ಕಂದಗಲ್, ಎಂ.ಎಸ್.ಪಾಟಿಲ, ಶಂಕರ ನಾಯಕ, ನಿಂಗಪ್ ಬಾಳೆಕಾಯಿ, ಸಲೀಮ ಮೊಮಿನ್, ಜಬ್ಬಾರ ಕಲಬುರ್ಗಿ, ಭುವನೇಶ್ವರಿ ಹಾದಿಮನಿ, ಗೂಡುಸಾಬ್ ಹೊನವಾಡ ಪಾಲ್ಗೊಂಡಿದ್ದರು.

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !