ಬರೆ ಕುಸಿದು ಮನೆ ಧ್ವಂಸ: ಮಹಿಳೆಗೆ ಗಾಯ

7

ಬರೆ ಕುಸಿದು ಮನೆ ಧ್ವಂಸ: ಮಹಿಳೆಗೆ ಗಾಯ

Published:
Updated:
ಪುತ್ತೂರು ತಾಲ್ಲೂಕಿನ ಶಾಂತಿಗೋಡು ಗ್ರಾಮದ ಪಂಜಿಗ ಎಂಬಲ್ಲಿ ಪಕ್ಕದ ಧರೆ ಕುಸಿದು ಬಿದ್ದು ಮನೆಯೊಂದು ಸಂಪೂರ್ಣವಾಗಿ ಧ್ವಂಸಗೊಂಡಿದೆ.

ಪುತ್ತೂರು : ಮಳೆ ಭಾನುವಾರವೂ ಮುಂದುವರಿದಿದ್ದು, ತಾಲ್ಲೂಕಿನ ಶಾಂತಿಗೋಡು ಗ್ರಾಮದ ಪಂಜಿಗ ಎಂಬಲ್ಲಿ ಪಕ್ಕದ ಧರೆ ಕುಸಿದು ಬಿದ್ದು ಮನೆ ಹಾನಿಯಾದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಶಾಂತಿಗೊಡು ಗ್ರಾಮದ ಪಂಜಿಗ ನಿವಾಸಿ, ಅಂಗವಿಕಲರಾಗಿರುವ ಬಾಬು ಕುಲಾಲ್ ಎಂಬವರ ಮನೆಯ ಬದಿಯಲ್ಲಿರುವ ಧರೆ ಭಾನುವಾರ ಮಧ್ಯಾಹ್ನ ಮನೆಯ ಮೇಲೆಯೇ ಕುಸಿದು ಬಿದ್ದಿದ್ದು, ಹಂಚಿನ ಮಾಡಿನ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಘಟನೆಯ ವೇಳೆ ಮನೆಯೊಳಗಿದ್ದ ಬಾಬು ಕುಲಾಲ್ ಅವರ ಪತ್ನಿ ಮೀನಾಕ್ಷಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಕಾಲು ಮುರಿತಕ್ಕೊಳಗಾಗಿರುವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮನೆಯ ಪಕ್ಕದಲ್ಲಿರುವ ಬಚ್ಚಲು ಮನೆಯ ಗೋಡೆಯೂ ಬಿರುಕು ಬಿಟ್ಟಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಕ್ಕದ ಧರೆ ಕುಸಿದು ಅಪಾಯ ಸಂಭವಿಸಬಹುದು ಎಂಬ ಭಯದಿಂದ ಅಂಗವಿಕಲರಾಗಿರುವ ಬಾಬು ಕುಲಾಲ್ ಮತ್ತು ಅವರ ಮನೆಯವರು ವಾಸ್ತವ್ಯವನ್ನು ಸಂಬಂಧಿಕರೊಬ್ಬರ ಮನೆಗೆ ಸ್ಥಳಾಂತರಿಸಿದ್ದರು. ಆದರೆ ವಸ್ತುಗಳೆಲ್ಲವೂ ಆ ಮನೆಯಲ್ಲಿಯೇ ಇತ್ತು. ಭಾನುವಾರ ಮಧ್ಯಾಹ್ನ ಬಾಬು ಅವರ ಪತ್ನಿ ಮೀನಾಕ್ಷಿಯವರು ಈ ಮನೆಗೆ ಬಂದಿದ್ದ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ .

ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಪೆತ್ತಡ್ಕ ಎಂಬಲ್ಲಿನ ನಿವಾಸಿ ಅಬ್ಬಾಸ್ ಅವರ ಪುತ್ರ ಲತೀಫ್ ಎಂಬವರ ತಾರಸಿ ಮನೆಯ ಮೇಲೆ ಹಿಂಭಾಗದಲ್ಲಿರುವ ಪಕ್ಕದ ಧರೆ ಕುಸಿದು ಬಿದ್ದು, ಮನೆಗೆ ಹಾನಿಯಾಗಿದೆ. ಧರೆ ಕುಸಿದು ಮನೆಯ ಮೇಲೆಯೇ ಬಿದ್ದ ಪರಿಣಾಮವಾಗಿ ಮನೆಯ ಹಿಂಭಾಗದ ಎರಡು ಕೋಣೆಗಳಿಗೆ ಭಾಗಶಃ ಹಾನಿಯಾಗಿದ್ದು, ಗೋಡೆಗಳು ಬಿರುಕುಬಿಟ್ಟಿವೆ. ಕೋಣೆಯೊಳಗಿದ್ದ ಬೆಲೆಬಾಳುವ ವಸ್ತುಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ. ಹಿಂಭಾಗದ ಕೋಣೆಯೊಳಗೆ ಮಣ್ಣು ಮತ್ತು ಕಲ್ಲು ಬಿದ್ದಿದ್ದರೂ ಕೋಣೆಯೊಳಗೆ ಮಲಗಿಸಲಾಗಿದ್ದ ಲತೀಫ್ ಅವರ ಎಳೆಯ ಪ್ರಾಯದ ಮಗು ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ.

ಶಾಸಕ ಭೇಟಿ: ಧರೆ ಕುಸಿದು ಮನೆ ಸಂಪೂರ್ಣವಾಗಿ ಧ್ವಂಸಗೊಂಡ ಬಾಬು ಅವರ ಮನೆಗೆ ಶಾಸಕ ಸಂಜೀವ ಮಠಂದೂರು ಅವರು ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !