ನೈತಿಕತೆಯಿಂದ ಸಂಸ್ಥೆಯ ಆಯಸ್ಸು ವೃದ್ಧಿ

7
ಹುಳಗೋಳ ಸೊಸೈಟಿಯ ಶತಮಾನೋತ್ಸವ ವರ್ಷಾಚರಣೆಯಲ್ಲಿ ಪ್ರೊ ಎ.ವೈದ್ಯನಾಥನ್ ಸಮಿತಿ ಸದಸ್ಯ ಎಂ.ಎಸ್. ಶ್ರೀರಾಮ ಅಭಿಮತ

ನೈತಿಕತೆಯಿಂದ ಸಂಸ್ಥೆಯ ಆಯಸ್ಸು ವೃದ್ಧಿ

Published:
Updated:
ಶಿರಸಿ ತಾಲ್ಲೂಕಿನ ಭೈರುಂಬೆಯಲ್ಲಿರುವ ಹುಳಗೋಳ ಸೊಸೈಟಿಯ ‘ನೂರು ಮೆಟ್ಟಿಲೇರಿ..’ ಪುಸ್ತಕವನ್ನು ಪ್ರೊ ಎ.ವೈದ್ಯನಾಥನ್ ಸಮಿತಿ ಸದಸ್ಯ ಎಂ.ಆರ್.ಶ್ರೀರಾಮ (ಬಲದಿಂದ ಮೂರನೆಯವರು) ಬಿಡುಗಡೆಗೊಳಿಸಿದರು

ಶಿರಸಿ: ಯಾವುದೇ ಸಂಸ್ಥೆಯಾದರೂ ಮೂಲ ತತ್ವ, ಸಿದ್ಧಾಂತ ಉಳಿಸಿಕೊಳ್ಳುವ ಜತೆಗೆ ಸ್ಥಳೀಯತೆ ಮತ್ತು ನೈತಿಕತೆ ಬೆಳೆಸಿಕೊಂಡರೆ, ದು ನೂರ್ಕಾಲ ಬಾಳುತ್ತದೆ ಎಂದು ಪ್ರೊ ಎ.ವೈದ್ಯನಾಥನ್ ಸಮಿತಿ ಸದಸ್ಯ ಎಂ.ಎಸ್. ಶ್ರೀರಾಮ ಅಭಿಪ್ರಾಯಪಟ್ಟರು. 

ತಾಲ್ಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಸೋಮವಾರ ನಡೆದ ಮೊದಲ ಕಾರ್ಯಕ್ರಮದಲ್ಲಿ ‘ನೂರು ಮೆಟ್ಟಿಲೇರಿ..‘ ಸಂಘದ ಸಂಕ್ಷಿಪ್ತ ಇತಿಹಾಸವನ್ನೊಳಗೊಂಡ ಪುಸ್ತಕ ಬಿಡುಗಡೆಗೊಳಿಸಿ, ಅವರು ಮಾತನಾಡಿದರು. ಸಂಸ್ಥೆಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಲೇ, ಬದಲಾವಣೆಯ ಪರಿಭಾಷೆಯನ್ನೂ ಹೊಂದಿರಬೇಕು. ಮೂಲ ಸಿದ್ಧಾಂತವನ್ನು ಮರೆತಾಗ ಸಂಸ್ಥೆಯ ಆತ್ಮ ನಾಶವಾಗುತ್ತದೆ. ಜನರ ಮನಸ್ಸಿನಲ್ಲಿ ಸಂಸ್ಥೆಯ ಪ್ರಾಮುಖ್ಯತೆ ಸದಾ ಉಳಿಯಬೇಕು. ಸಂಸ್ಥೆ ಕಟ್ಟುವುದು ಕಷ್ಟದ ಕೆಲಸ, ಆದರೆ ಅದು ಕುಸಿಯುವುದು ಅಷ್ಟೇ ಸುಲಭ. ಹೀಗಾಗಿ, ನೈತಿಕತೆ ಉಳಿಸಿಕೊಳ್ಳುವಲ್ಲಿ ಎಚ್ಚರವಹಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಭಾರತಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ‘ಹುಳಗೋಳ ಸಹಕಾರಿ ಸಂಘವು ಸಹಕಾರಿ ಕ್ಷೇತ್ರದ ಪ್ರಯೋಗ ಶಾಲೆಯಾಗಿದೆ. ಸಮುದಾಯ ಶಿಕ್ಷಣವನ್ನು ಸಂಘಟಿತವಾಗಿ ಕಾರ್ಯಾನುಷ್ಠಾನ ಮಾಡುವಲ್ಲಿ ಈ ಸಂಘ ರಾಜ್ಯಕ್ಕೇ ಮಾದರಿಯಾಗಿದೆ. ಪ್ರಾಮಾಣಿಕ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸಿಬ್ಬಂದಿ ಪ್ರಾಮಾಣಿಕವಾಗಿ, ಒಂದೇ ಗುರಿಯೆಡೆಗೆ ಸಾಗಿದಾಗ ಯಶಸ್ಸು ಖಂಡಿತವಾಗಿ ಸಿಗುತ್ತದೆ’ ಎಂದರು.

ಸಂಘದ ಸದಸ್ಯರ ಮೊಬೈಲ್ ನಂಬರ್ ಮಾರ್ಗದರ್ಶಿಯನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಬಿಡುಗಡೆ ಮಾಡಿದರು. ದೇಶ ಗುಲಾಮಿತನದಲ್ಲಿದ್ದಾಗ, ವಿಶೇಷ ದೃಷ್ಟಿಕೋನದೊಂದಿಗೆ ಹುಟ್ಟಿದ್ದು ಹುಳಗೋಳ ಸಹಕಾರಿ ಸಂಘವಾಗಿದೆ. ಸದಸ್ಯರಲ್ಲಿ ಜ್ಞಾನ ಕ್ರಾಂತಿ ಮಾಡಿಸಿ ಅವರ ಏಳ್ಗೆಯ ಜೊತೆಗೆ ಸಂಘವೂ ಬೆಳೆದಿದ್ದು ವಿಶೇಷವಾಗಿದೆ’ ಎಂದರು.

ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದರು. ಸಹಕಾರಿ ಧುರೀಣ ಎನ್.ಪಿ.ಗಾಂವಕರ, ಸಹಕಾರಿ ಸಂಘಗಳ ಉಪನಿಬಂಧಕ ಜಿ.ಎಸ್.ಜಯಪ್ರಕಾಶ, ಸಂಘದ ಉಪಾಧ್ಯಕ್ಷ ಆರ್.ಎಂ.ಹೆಗಡೆ, ಮುಖ್ಯಕಾರ್ಯನಿರ್ವಾಹಕ ಜಿ.ಎಂ.ಹೆಗಡೆ ಮಾತ್ನಳ್ಳಿ ಇದ್ದರು. ಸಂಸ್ಥೆಯ ಪರಿಚಯ ಪುಸ್ತಕದ ಸಂಪಾದಕ ನಾಗಪತಿ ಹೆಗಡೆ ಹಾಗೂ ಮುದ್ರಣ ಮಾಡಿಕೊಟ್ಟ ಪಿ.ವಿ.ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಜಿ.ಎಂ.ಹೆಗಡೆ ಹುಳಗೋಳ ಸ್ವಾಗತಿಸಿದರು. ಅನಂತ ಭಟ್ಟ ನಿರೂಪಿಸಿದರು.

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ

ಸಾಲಮನ್ನಾ ಘೋಷಣೆ ಮಾಡಿದರೆ ಸಾಲದು ಬದಲಾಗಿ ಸಹಕಾರಿ ಸಂಘಗಳಿಗೆ ಹಣ ಜಮಾ ಮಾಡಬೇಕು. ರಾಜ್ಯ ಸರ್ಕಾರದಿಂದ ಭಾರತಕ್ಕೆ ಸಾಲಮನ್ನಾ ಬಾಕಿ ₹ 4.5 ಕೋಟಿ ಬಂದರೆ ಮಾತ್ರ ರೈತರಿಗೆ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ.
–ಜಿ.ಎಂ.ಹೆಗಡೆ ಹುಳಗೋಳ, ಟಿಎಂಎಸ್ ಅಧ್ಯಕ್ಷ

ಜಿ.ಎಂ.ಹೆಗಡೆ ಅವರ ದೂರದೃಷ್ಟಿ ಚಿಂತನೆಯ ಫಲವಾಗಿ ಸೊಸೈಟಿ ಈ ಮಟ್ಟಕ್ಕೆ ಬೆಳೆದಿದೆ. ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಸಿಗದಿದ್ದರೂ, ಅವರು ಸಂಘದ ಸದಸ್ಯರ ಮನಸ್ಸಿನಲ್ಲಿ ರತ್ನವಾಗಿದ್ದಾರೆ. 
–ಎಸ್‌.ಪಿ.ಶೆಟ್ಟಿ, ಹಿರಿಯ ಸಹಕಾರಿ

ಸಾವಿರಾರು ಸಹಕಾರಿ ಸಂಸ್ಥೆಗಳ ಪ್ರಯತ್ನದಿಂದ ಭಾರತವು ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಮುಂಚೂಣಿಯಲ್ಲಿರುವ ಐದು ರಾಷ್ಟ್ರಗಳಲ್ಲಿ ನಮ್ಮ ದೇಶ ಕೂಡ ಒಂದಾಗಿದೆ.
ಎಸ್.ಆರ್.ಸತೀಶ್ಚಂದ್ರ, ಕ್ಯಾಂಪ್ಕೊ ಅಧ್ಯಕ್ಷ

ಪ್ರತಿ ತಿಂಗಳು ಒಂದೊಂದು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸೊಸೈಟಿಯ ಶತಮಾನೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
–ಸುರೇಶ್ಚಂದ್ರ ಹೆಗಡೆ, ಸೊಸೈಟಿಯ ನಿರ್ದೇಶಕ

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !