7

ಉಕ್ಕಿನಡ್ಕ ವೈದ್ಯಕೀಯ ಕಾಲೇಜು: ₹80 ಕೋಟಿ ಅನುದಾನ ಬಿಡುಗಡೆ

Published:
Updated:
ಬದಿಯಡ್ಕ ಸಮೀಪದ ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ (ಬದಿಯಡ್ಕ ಚಿತ್ರ)

‌ಬದಿಯಡ್ಕ: ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡದ ನಿರ್ಮಾಣಕ್ಕಾಗಿ ಕೇರಳ ಸರ್ಕಾರವು ನಗದು ₹80 ಕೋಟಿ ಬಿಡುಗಡೆ ಮಾಡಿದೆ.

ಈ ನಿಟ್ಟಿನಲ್ಲಿ ಗುತ್ತಿಗೆ ಒಪ್ಪಂದ ಪ್ರಕ್ರಿಯೆ ಪೂರ್ತಿಗೊಳಿಸಿ ಇದೇ 11ರಂದು ತಿರುವನಂತಪುರದಲ್ಲಿ ನಡೆಯಲಿರುವ ತಾಂತ್ರಿಕ ತಜ್ಞರ ಸಮಿತಿ ಅಂಗೀಕಾರ ನೀಡಲಿದೆ. ಕಾಸರಗೋಡು ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿ ಕೂಡಲೇ ನಡೆಸಿ ಶೀಘ್ರವಾಗಿ ಸಾರ್ವಜನಿಕರ ಸೇವೆ ಒದಗಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನೆಯ ಮೂಲಕ ಒತ್ತಡ ಹೇರಿದ್ದುವು.

 ಕಟ್ಟಡ ಕಾಮಗಾರಿಯನ್ನು ಚೆನೈ ಮೂಲದ ಆರ್ ಆರ್ ಬಿಲ್ಡರ್ಸ್‌ಗೆ ಗುತ್ತಿಗೆ ನೀಡಲಾಗಿದೆ. ಸಂಸ್ಥೆಯ ಪ್ರಮುಖರು ಕೆಲ ದಿನಗಳ ಹಿಂದೆ ಉಕ್ಕಿನಡ್ಕಕ್ಕೆ ಬಂದು ಸ್ಥಳ ಹಾಗೂ ನಡೆದ ಕಾಮಗಾರಿಯ ಪರಿಶೀಲನೆ ನಡೆಸಿ ಭೂಮಿಪೂಜೆ ನೆರವೇರಿಸಿದ್ದರು. ಮಳೆಯ ಬಿರುಸು ಕಡಿಮೆಯಾದ ತಕ್ಷಣ ಮುಂದಿನ ಕಾಮಗಾರಿ ಆರಂಭಿಸುವುದಾಗಿ ಮಾಹಿತಿ  ಲಭಿಸಿದೆ.

ಈ ಹಿಂದೆ ಕಾಲೇಜಿನ ಕಾಸರಗೋಡು ಪ್ಯಾಕೇಜ್‌ನಲ್ಲಿ ₹25 ಕೋಟಿ ವೆಚ್ಚದಲ್ಲಿ ಆಡಳಿತಾತ್ಮಕ ವಿಭಾಗದ ಕಾರ್ಯ ಆರಂಭಿಸಿದ್ದರೂ, ಬಳಿಕ ಕಾಮಗಾರಿ ಸ್ಥಗಿತವಾಗಿತ್ತು. ನಬಾರ್ಡ್‌ನಿಂದ ಲಭಿಸಿದ ₹69 ಕೋಟಿ ಮೊತ್ತದ ಟೆಂಡರ್ ಆಗಿದ್ದರೂ, ಬಳಿಕ ಟೆಂಡರ್ ರದ್ದುಗೊಂಡಿತ್ತು.

ಈ ನಡುವೆ ವೈದ್ಯಕೀಯ ಕಾಲೇಜು ಸ್ಥಳಾಂತರದ ಬಗ್ಗೆ ವದಂತಿಯೂ ಹರಡಿತ್ತು.  ಸ್ಥಳೀಯರು ಪ್ರತಿಭಟಿಸಲು ಸಿದ್ಧತೆ ನಡೆಸಿದ್ದರು. ಇದೀಗ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ₹ 80,26,77000 ಮೊತ್ತದ ಅನುದಾನ ಲಭಿಸಿರುವುದು ಈ ಪ್ರದೇಶದ ಮಂದಿಯಲ್ಲಿ ಸಹಜವಾಗಿಯೇ ಹರ್ಷ ಮೂಡಿಸಿದೆ.

ಉಕ್ಕಿನಡ್ಕದಲ್ಲಿ ಸುಮಾರು ₹6.5 ಎಕರೆ ಜಮೀನಿನಲ್ಲಿ ಎಂಡೊ ಸಂತ್ರಸ್ತರ ಹಾಗೂ ಇತರ ರೋಗಿಗಳ ಚಿಕಿತ್ಸೆಗಾಗಿ ಈ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಕಾಸರಗೋಡು ವೈದ್ಯಕೀಯ ಕಾಲೇಜು ಸುಮಾರು ₹385 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ವಿದ್ಯುತ್ ವ್ಯವಸ್ಥೆಗಾಗಿ ಸುಮಾರು ₹6 ಕೋಟಿ ವೆಚ್ಚವಾಗಲಿದೆ. ಮೂಲಸೌಕರ್ಯ, ವಸತಿ ಮೊದಲಾದ ಅಗತ್ಯಗಳಿಗೆ ಸುಮಾರು ₹150 ಕೋಟಿ ವೆಚ್ಚ ತಗುಲಲಿದೆ ಎಂಬ ಮಾಹಿತಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !