ಆರೋಗ್ಯ ಭಾಗ್ಯ ಇನ್ನೂ ಮರೀಚಿಕೆ

7
ಇಳಕಲ್‌: ಉದ್ಘಾಟನೆಯಾಗಿ ಐದು ತಿಂಗಳಾದರೂ ಜನರಿಗಿಲ್ಲ ಸೇವೆ

ಆರೋಗ್ಯ ಭಾಗ್ಯ ಇನ್ನೂ ಮರೀಚಿಕೆ

Published:
Updated:
ಇಳಕಲ್‌ ಗೌಳೇರಗುಡಿಯಲ್ಲಿ ನಿರ್ಮಿಸಲಾದ ನೂತನ ಆಸ್ಪತ್ರೆ

ಇಳಕಲ್: ನಗರದ ಗೌಳೇರಗುಡಿಯಲ್ಲಿ (ನವನಗರ)ಮಹಿಳೆಯರು ಮತ್ತು ಮಕ್ಕಳಿಗಾಗಿ ₹ 7.60 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 30 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆಯಾಗಿ ಐದು ತಿಂಗಳಾಗಿದೆ. ಆದರೆ ಅಲ್ಲಿ ರೋಗಿಗಳಿಗೆ ಆರೋಗ್ಯ ಭಾಗ್ಯ ದೊರಕಿಲ್ಲ.

ಕರ್ನಾಟಕ ಆರೋಗ್ಯ ಪದ್ದತಿ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿ ನಿರ್ಮಾಣಗೊಂಡಿರುವ ಆಸ್ಪತ್ರೆಯನ್ನು ಫೆ.28ರಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದ್ದರು. ಆದರೆ ಆಸ್ಪತ್ರೆಗೆ ಈವರೆಗೂ ವೈದ್ಯರು ಸೇರಿದಂತೆ ಯಾವುದೇ ಸಿಬ್ಬಂದಿ ನೇಮಕವಾಗಿಲ್ಲ.

ಸಿಬ್ಬಂದಿಗಾಗಿ 15 ವಸತಿ ಗೃಹಗಳು ಸಹ ನಿರ್ಮಾಣವಾಗಿವೆ. ಬಳಕೆ ಇಲ್ಲದ ಈ ಬೃಹತ್‍ ಕಟ್ಟಡದಲ್ಲಿ ಪಕ್ಕದ ಇಟ್ಟಂಗಿ ಭಟ್ಟಿಯ ಧೂಳು ತುಂಬಿದೆ. ಈ ನೂತನ ಆಸ್ಪತ್ರೆಯು ತಾಲ್ಲೂಕು ಮಟ್ಟದ ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಯಾಗಿದೆ. ಆದರೆ ವೈದ್ಯರ ನೇಮಕಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿಲ್ಲ. ಆಸ್ಪತ್ರೆ ಕಾರ್ಯಾರಂಭ ಮಾಡಿದರೇ ನಗರದ ಗೌಳೇರಗುಡಿ, ಬನ್ನಿಕಟ್ಟಿ, ಶಿವಾಜಿನಗರ ಭಾಗವಲ್ಲದೇ ಗೋನಾಳ ಎಸ್‌ಬಿ, ಉಪನಾಳ, ಸಂಕ್ಲಾಪುರ ಗ್ರಾಮಸ್ಥರಿಗೆ ಉಪಯೋಗವಾಗಲಿದೆ.

‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ, ಪೀಠೋಪಕರಣಗಳ ಖರೀದಿಗೆ ತೋರುವ ಆಸಕ್ತಿ ಸಿಬ್ಬಂದಿ ನೇಮಕಕ್ಕೆ ತೋರುತ್ತಿಲ್ಲ. ಕೋಟಿಗಟ್ಟಲೇ ಹಣ ಆಸ್ಪತ್ರೆಯ ಕಟ್ಟಡಕ್ಕೆ ಹಾಗೂ ಸಲಕರಣೆಗಳ ಖರೀದಿಗಾಗಿ ಖರ್ಚಾಗಿದೆ. ಆದರೂ ಗರ್ಭಿಣಿಯರು ಹಾಗೂ ಮಕ್ಕಳು ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವುದು ತಪ್ಪಿಲ್ಲ’ ಎಂದು ಉಪನಾಳ ಎಸ್‍.ಬಿ ಗ್ರಾಮದ ಶಿವಪ್ಪ ದೊಡಮನಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಹೊಸ ಆಸ್ಪತ್ರೆಗೆ ಪ್ರಸೂತಿ ತಜ್ಞ, ಚಿಕ್ಕಮಕ್ಕಳ ತಜ್ಞ ಹಾಗೂ ಅರವಳಿಕೆ ತಜ್ಞ ವೈದ್ಯರ ಅಗತ್ಯವಿದೆ. ಈಗಿರವ ಸಾರ್ವಜನಿಕ ಆಸ್ಪತ್ರೆಯಲ್ಲೂ ತಜ್ಞ ವೈದ್ಯರ ಕೊರತೆ ಇದೆ. ಹಾಗಾಗಿ ಅಲ್ಲಿಂದ ಹೊಸ ಆಸ್ಪತ್ರೆಗೆ ಯಾರನ್ನೂ ನಿಯೋಜನೆ ಮಾಡಿಲ್ಲ. ಉತ್ತಮ ವೇತನದ ಅವಕಾಶವಿದ್ದರೂ ತಜ್ಞ ವೈದ್ಯರು ಸರ್ಕಾರಿ ಸೇವೆಗೆ ಬರುತ್ತಿಲ್ಲ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಕುಸುಮಾ ಮಾಗಿ ಅಸಹಾಯಕತೆ’ ವ್ಯಕ್ತಪಡಿಸುತ್ತಾರೆ. ‘ಇಟ್ಟಂಗಿ ಭಟ್ಟಿಯಿಂದ ಆಸ್ಪತ್ರೆಗೆ ಆಗುವ ತೊಂದರೆಯ ಬಗ್ಗೆ ಶೀಘ್ರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಗತ್ಯಬಿದ್ದರೆ ಸ್ಥಳಾಂತರಕ್ಕೆ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.

ಇಟ್ಟಂಗಿ ಭಟ್ಟಿ ದೂಳು:

ಆಸ್ಪತ್ರೆಯ ಕಂಪೌಂಡ್‌ಗೆ ಹೊಂದಿಕೊಂಡು ಇಟ್ಟಂಗಿ ಭಟ್ಟಿ ಇದೆ. ಇಲ್ಲಿಂದ ಏಳುವ ದೂಳು ಆಸ್ಪತ್ರೆಯಲ್ಲಿ ತುಂಬಿಕೊಂಡಿದೆ. ಇಡೀ ಆಸ್ಪತ್ರೆಯನ್ನು ಹೊಗೆ ಆವರಿಸುತ್ತದೆ. ಕಾರಣ ವೈದ್ಯರು ಹಾಗೂ ಇತರ ಸಿಬ್ಬಂದಿಯನ್ನು ನೇಮಕ ಮಾಡಿದರೂ ಸಹ ಇಟ್ಟಂಗಿ ಭಟ್ಟಿಯನ್ನು ಸ್ಥಳಾಂತರ ಮಾಡದೇ ಆಸ್ಪತ್ರೆಯ ಕಾರ್ಯಾರಂಭ ಸಾಧ್ಯವೇ ಇಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೆಯ ಸಿಬ್ಬಂದಿ ಸಮಸ್ಯೆ ಬಿಚ್ಚಿಟ್ಟರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !