23ರಿಂದ‌ ಭತ್ತ ಖರೀದಿ ಕೇಂದ್ರ ಆರಂಭ

7

23ರಿಂದ‌ ಭತ್ತ ಖರೀದಿ ಕೇಂದ್ರ ಆರಂಭ

Published:
Updated:
ಎನ್‌.ಮಂಜುಶ್ರೀ

ಮಂಡ್ಯ: ‘ರಾಜ್ಯ ಸರ್ಕಾರದ ಸೂಚನೆಯಂತೆ ಬೆಂಬಲ ಬೆಲೆ ಯೋಜನೆಯಡಿ ಭತ್ತ ಕೊಳ್ಳಲು ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಜುಲೈ 23ರಿಂದ 31ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಕುರಿತು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಭತ್ತ ಖರೀದಿಯ ನೋಂದಣಿ ಪ್ರಕ್ರಿಯೆ ಜುಲೈ 5 ರಂದು ಆರಂಭಗೊಂಡು ಜುಲೈ 21ರ ಅಂತ್ಯಗೊಳ್ಳಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ ₹ 1,550 ನಿಗದಿ ಮಾಡಲಾಗಿದೆ. ನೋಂದಾಯಿತ ರೈತರಿಂದ ಮಾತ್ರ ಖರೀದಿ ಮಾಡಲಾಗುವುದು. ಭತ್ತ ಖರೀದಿ ಕೇಂದ್ರ ಸ್ಥಾಪಿಸಿರುವ ಬಗ್ಗೆ ರೈತ ಸಂಪರ್ಕ ಕೇಂದ್ರಗಳಲ್ಲಿ, ತಾಲ್ಲೂಕು ಕಚೇರಿಗಳಲ್ಲಿ, ಎಪಿಎಂಸಿಗಳಲ್ಲಿ ಹಾಗೂ ರೈತರ ಸಂತೆಗಳಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್‌ ಅಳವಡಿಸಿ ಪ್ರಚಾರ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಖರೀದಿ ಕೇಂದ್ರಗಳಲ್ಲಿ ಪ್ರಕ್ರಿಯೆ ನಡೆಸಲು ಎಲ್ಲಾ ತಾಲ್ಲೂಕುಗಳಲ್ಲಿಯೂ ಖರೀದಿ ವ್ಯವಸ್ಥಾಪಕರನ್ನು ನೇಮಿಸಲಾಗಿದೆ. ಇವರು ನಿಗದಿತ ಖರೀದಿ ಕೇಂದ್ರಗಳಿಗೆ ಹಾಜರಾಗಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರಗೆ ಕಡ್ಡಾಯವಾಗಿ ರೈತರ ಹೆಸರನ್ನು ಆನ್‍ಲೈನ್‍ನಲ್ಲಿ ನೋಂದಾಯಿಸುವ ಕೆಲಸ ಮಾಡಬೇಕು. ಖರೀದಿ ಕೇಂದ್ರಗಳಲ್ಲಿ ಅಗತ್ಯವಾಗಿರುವ ಕಂಪ್ಯೂಟರ್, ಪ್ರಿಂಟರ್, ಬಯೋಮೆಟ್ರಿಕ್ ಹಾಗೂ ಯುಪಿಎಸ್ ಉಪಕರಣ ಅಳವಡಿಸಲು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಉತ್ತಮ ಗುಣಮಟ್ಟದ, ಒಣಗಿದ ಮತ್ತು ಗರಿಷ್ಠ ಸ್ವಚ್ಛ ಮಾಡಿದ ಭತ್ತವನ್ನು ಮಾತ್ರ ರೈತರಿಂದ ಖರೀದಿಸಲಾಗುವುದು. ಅಲ್ಲದೇ ಖರೀದಿ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡುವಂತೆ ಹಾಗೂ ಕೃಷಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಲು ಕ್ರಮವಹಿಸಬೇಕು. ರೈತರಿಂದ ಖರೀದಿಸಲಾಗುವ ಭತ್ತವನ್ನು ಸಂಗ್ರಹಣೆಗೆ ಗೋದಾಮುಗಳ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಕುಮುದಾ, ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಸಹಕಾರ ಇಲಾಖೆಯ ಉಪ ನಿಬಂಧಕರಾದ ಕುಮಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !