ಸಕಾಲಕ್ಕೆ ಗೌರವಧನ ಪಾವತಿಗೆ ಒತ್ತಾಯ

7
ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ನೌಕರರ ಧರಣಿ

ಸಕಾಲಕ್ಕೆ ಗೌರವಧನ ಪಾವತಿಗೆ ಒತ್ತಾಯ

Published:
Updated:
ಸಕಾಲಕ್ಕೆ ಗೌರವಧನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಕೋಲಾರ: ಸಕಾಲಕ್ಕೆ ಗೌರವಧನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಂಗನವಾಡಿ ನೌಕರರಿಗೆ ಪ್ರತಿ ತಿಂಗಳು ಗೌರವಧನ ಕೊಡುತ್ತಿಲ್ಲ. ನಾಲ್ಕೈದು ತಿಂಗಳಿಗೊಮ್ಮೆ ಗೌರವಧನ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗೌರವಧನ ನೀಡಲು ವಿಳಂಬ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 67,000 ಅಂಗನವಾಡಿ ಕೇಂದ್ರಗಳಿದೆ. ಈ ಪೈಕಿ 34,000 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 26,000 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಮಾತೃಪೂರ್ಣ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಿಂದ ಅಂಗನವಾಡಿ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮುನಿರಾಜಮ್ಮ ಹೇಳಿದರು.

‘ರಾಜ್ಯದೆಲ್ಲೆಡೆ ಮಾತೃಪೂರ್ಣ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಮಕ್ಕಳು ಹಾಗೂ ಯೋಜನೆ ಫಲಾನುಭವಿಗಳನ್ನು ನೋಡಿಕೊಳ್ಳಲು ನೌಕರರಿಗೆ ಸಮಸ್ಯೆಯಾಗುತ್ತಿದೆ. ಯೋಜನೆ ಜಾರಿ ನಿರ್ಲಕ್ಷಿಸಿದರೆ ಸೇವೆಯಿಂದ ಅಮಾನತು ಮಾಡುವುದಾಗಿ ಅಧಿಕಾರಿಗಳು ಬೆದರಿಸುತ್ತಾರೆ. ಅಗತ್ಯ ಸೌಕರ್ಯಗಳಿಲ್ಲದೆ ಹೇಗೆ ಕೆಲಸ ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದರು.

ಸಬೂಬು ಹೇಳುತ್ತಾರೆ: ‘ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗೌರವಧನದಲ್ಲಿ ಮುಕ್ಕಾಲು ಭಾಗವನ್ನು ಆಹಾರ ಪದಾರ್ಥಗಳ ಖರೀದಿಗೆ ಮೀಸಲಿಡುವಂತಾಗಿದೆ. ಹೀಗಾಗಿ ಜೀವನ ನಿರ್ವಹಣೆಗೆ ಹಣ ಇಲ್ಲದಂತಾಗಿದೆ. ಸಕಾಲಕ್ಕೆ ಆಹಾರ ಪದಾರ್ಥಗಳ ಬಿಲ್‌ ಪಾವತಿಸುವಂತೆ ಅಧಿಕಾರಿಗಳನ್ನು ಕೇಳಿದರೆ ಆಯಾ ಗ್ರಾಮ ಪಂಚಾಯಿತಿ ಸದಸ್ಯರ ಜತೆ ಜಂಟಿ ಖಾತೆ ತೆರೆಯುವಂತೆ ಸಬೂಬು ಹೇಳುತ್ತಾರೆ’ ಎಂದು ಧರಣಿನಿರತರು ದೂರಿದರು.

‘ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಅಡುಗೆ ಮಾಡಲು ಗ್ಯಾಸ್‌ ಸಿಲಿಂಡರ್‌ ಪೂರೈಸುತ್ತಿಲ್ಲ. ಸಾಕಷ್ಟು ಕೇಂದ್ರಗಳಲ್ಲಿ ಅಡುಗೆ ಪಾತ್ರೆಗಳಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಮೊಟ್ಟೆ, ತರಕಾರಿ, ಆಹಾರ ಪದಾರ್ಥಗಳನ್ನು ಖರೀದಿಸಲು ಹಣದ ಕೊರತೆಯಿದೆ. ಬಾಣಂತಿಯರಿಗೆ ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಈ ಸಮಸ್ಯೆಯನ್ನು ಅಧಿಕಾರಿಗಳ ಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಖಾಸಗೀಕರಣ ಬೇಡ: ‘ಅಂಗನವಾಡಿ ಕೇಂದ್ರಗಳ ಕೆಲಸದ ಅವಧಿಯನ್ನು ಸಮಗ್ರ ಬಾಲವಿಕಾಸ ಯೋಜನೆ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ನಗರ ಪ್ರದೇಶದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಜಾರಿಗೊಳಿಸಬೇಕು. ನಿವೃತ್ತಿ ಅಂಗನವಾಡಿ ಕಾರ್ಯರ್ತೆಯರು ಹಾಗೂ ಸಹಾಯಕರಿಗೆ ಕಡ್ಡಾಯವಾಗಿ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಈ ಹಿಂದೆ ಇದ್ದಂತೆ ಬಾಣಂತಿಯರು ಮತ್ತು ಗರ್ಭಿಣಿಯರ ಮನೆಗೆ ಆಹಾರ ಪದಾರ್ಥ ವಿತರಿಸಬೇಕು. ಮಾತೃಪೂರ್ಣ ಯೋಜನೆಗೆ ಮೀಸಲಿಟ್ಟಿರುವ ಹಣವನ್ನು ಹೆರಿಗೆ ಸಮಯದಲ್ಲಿ ನೀಡಬೇಕು. ಸಮಗ್ರ ಬಾಲವಿಕಾಸ ಯೋಜನೆ ಖಾಸಗೀಕರಣಗೊಳಿಸಬಾರದು’ ಎಂದು ಮನವಿ ಮಾಡಿದರು.

ನಿರ್ಬಂಧ ತೆಗೆಯಬೇಕು: ‘ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಮತ್ತು ಕೇರಳ ರಾಜ್ಯದಲ್ಲಿ ಅಂಗನವಾಡಿ ನೌಕರರ ಗೌರವಧನ ಹೆಚ್ಚಿಸಲಾಗಿದೆ. ರಾಜ್ಯದಲ್ಲೂ ಸೇವಾ ಜೇಷ್ಠತೆ ಆಧಾರದಲ್ಲಿ ಗೌರವಧನ ಹೆಚ್ಚಿಸಬೇಕು. ಬಾಲ ವಿಕಾಸ ಸಮಿತಿಯಲ್ಲಿನ ನಿರ್ಬಂಧಗಳನ್ನು ತೆಗೆಯಬೇಕು. ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ನಾಗರತ್ನ, ತಾಲ್ಲೂಕು ಘಟಕದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯರಾದ ಮುನಿಆಂಜಮ್ಮ, ವೆಂಕಟರತ್ನಮ್ಮ, ಮಂಜುಳಾ, ಕಲ್ಪನಾ, ಜಯಮ್ಮ, ನೇತ್ರಾವತಿ, ಶಾಲಿನಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !