ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ

5
ವಿವಿಧ ಬೇಡಿಕೆ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ

ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ

Published:
Updated:
ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯೆಯರು ಮಂಗಳವಾರ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು

ಮಂಡ್ಯ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಉಳಿವಿಗೆ ಒತ್ತಾಯಿಸಿ, ನೇರ ನಗದು ವರ್ಗಾವಣೆ, ಅನುದಾನ ಕಡಿತ, ಮಕ್ಕಳ ಮನೆ ಆರಂಭ ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯೆಯರು ಮಂಗಳವಾರ ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅನುದಾನ ಕಡಿತ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಕಳೆದ ಆರು ವರ್ಷಗಳಿಂದ ಹೆಚ್ಚಿಸಿಲ್ಲ. ಕನಿಷ್ಠ ಕೂಲಿ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಹಂತಹಂತವಾಗಿ ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳನ್ನು ಹತ್ತಿಕ್ಕುವ ಯತ್ನ ಮಾಡಲಾಗುತ್ತಿದೆ. ಐಸಿಡಿಎಸ್‌ಗೆ ನೇರ ನಗದು ವರ್ಗಾವಣೆ ಮೂಲಕ ಹಿಡಿತ ಸಾಧಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡುವ ಅನುದಾನ ಕಡಿತಗೊಳಿಸಕೂಡದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ ಸಿಗುವಷ್ಟು ಗೌರವಧನ ಹೆಚ್ಚಳ ಮಾಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭವಾಗಬೇಕು. ಸರ್ಕಾರಿ ಯೋಜನೆಗಳಲ್ಲಿ ದುಡಿಯುವ ಎಲ್ಲರಿಗೂ ಕನಿಷ್ಠ ವೇತನ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿ, ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ, ರಕ್ಷಣಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಮನೆ ಇಲ್ಲದ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಐಸಿಡಿಎಸ್‌ ಯೋಜನೆಯಡಿ ಅತ್ಯಂತ ಕಡಿಮೆ ಸೌಲಭ್ಯಕ್ಕೆ ಕಾರ್ಮಿಕರು ದುಡಿಯುತ್ತಿದ್ದಾರೆ. ಚುನಾವಣಾ ಕೆಲಸ, ಸ್ತ್ರೀಶಕ್ತಿ, ಅಂಗವಿಕಲರಿಗೆ ಸಂಬಂಧಿಸಿದ ಕೆಲಸದ ಜೊತೆಗೆ ಶೌಚಾಲಯ ನಿರ್ಮಾಣ ಕಾಮಗಾರಿಗೂ ಕಾರ್ಮಿಕರನ್ನು ಬಳಸಲಾಗುತ್ತಿದೆ. ಜೊತೆಗೆ ಹೊಸದಾಗಿ ಜಾರಿಯಾಗಿರುವ ಮಾತೃಪೂರ್ಣ ಯೋಜನೆ ಜಾರಿಗೊಳಿಸಲೂ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾದರೆ ಅವಮಾನ ಮಾಡುತ್ತಾರೆ. ಕೆಲಸದಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಹೇಳಿದರು.

ಹೊಸ ಅಂಗನವಾಡಿ ಕೇಂದ್ರಗಳು ಬಂದಾಗ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆದ್ಯತೆ ಕೊಡಬೇಕು. ಮಿನಿ ಅಂಗನವಾಡಿಗಳನ್ನು ಸಂಪೂರ್ಣ ಅಂಗನವಾಡಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೂ ವರ್ಗಾವಣೆ, ಮುಂಬಡ್ತಿ ಸಿಗಬೇಕು. ಸೇವಾ ಜೇಷ್ಠತೆ ಆಧಾರದ ಮೇಲೆ ಕನಿಷ್ಠ ವೇತನ ಜಾರಿ ಮಾಡಬೇಕು. ಮಾತೃವಂದನಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಹೆಚ್ಚುವರಿಯಾಗಿ ಜಾರಿ ಮಾಡಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಒಂದು ಕಂತಿನ ₹ 300 ಹಣ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಎಲ್ಲಾ ಅನ್ಯಾಯಗಳ ವಿರುದ್ಧ ಆಗಸ್ಟ್‌ 14 ಮತ್ತು ಸೆಪ್ಟೆಂಬರ್‌ 5ರಂದು ಹೋರಾಟ ರೂಪಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಗೌರವಾಧ್ಯಕ್ಷೆ ಮಂಜುಳಾರಾಜ್‌, ಅಧ್ಯಕ್ಷೆ ಜಯಲಕ್ಷ್ಮಮ್ಮ, ಖಜಾಂಚಿ ಪ್ರಮೀಳಾ ಕುಮಾರಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಲತಾ, ಕಮಲಾ, ಶಿವಮ್ಮ, ರೋಹಿಣಿ, ಜಯಶೀಲಾ, ಎಂ.ಗೀತಾ, ಎಂ.ಬಿ.ಸವಿತಾ, ಪುಷ್ಪಾವತಿ, ಮೀನಾಕ್ಷಿ, ಚಂಪಾ ಕುಮಾರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !