ಮನುಷ್ಯನ ಧನ ದಾಹಕ್ಕೆ ಅರಣ್ಯ ನಾಶ

7
ಬೀಜ ಬಿತ್ತನೆ ಅಭಿಯಾನದಲ್ಲಿ ಜಿ.ಪಂ ಸಿಇಒ ಲತಾಕುಮಾರಿ ಹೇಳಿಕೆ

ಮನುಷ್ಯನ ಧನ ದಾಹಕ್ಕೆ ಅರಣ್ಯ ನಾಶ

Published:
Updated:
ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೀಜ ಬಿತ್ತನೆ ಅಭಿಯಾನದಲ್ಲಿ ವಿದ್ಯಾರ್ಥಿನಿಯರು ಅರಣ್ಯ ಸಂರಕ್ಷಣೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕೋಲಾರ: ‘ಮನುಷ್ಯನ ಧನ ದಾಹಕ್ಕೆ ಅರಣ್ಯ ಸಂಪತ್ತು ನಾಶವಾಗಿದೆ. ಮನುಕುಲದ ಉಳಿವಿಗಾಗಿ ಅರಣ್ಯ ಸಂಪತ್ತು ಸಂರಕ್ಷಣೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೀಜಾಮೃತ ಲೇಪಿತ ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಹಣ ಸಂಪಾದನೆ ಹಿಂದೆ ಬಿದ್ದಿರುವ ಮನುಷ್ಯ ಭೂಮಿ, ಅರಣ್ಯ ಹಾಗೂ ಜಲ ಸಂಪತ್ತನ್ನು ನಾಶ ಮಾಡುತ್ತಿದ್ದೇನೆ. ಇದರಿಂದ ಪರಿಸರ ಅಸಮತೋಲನ ಹೆಚ್ಚುತ್ತಿದೆ’ ಎಂದು ವಿಷಾದಿಸಿದರು.

‘ಅರಣ್ಯ ನಾಶದಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚುತ್ತಿದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗಿ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇನ್ನಾದರೂ ಎಚ್ಚೆತ್ತು ಅರಣ್ಯ ಸಂಪತ್ತು ಉಳಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಕಾದಿದೆ’ ಎಂದು ಎಚ್ಚರಿಸಿದರು.

ಕಾಡು ಕಾಪಾಡಬೇಕು: ‘ಅರಣ್ಯಗಳು ಪ್ರಾಣಿ ಪಕ್ಷಿ ಸಂಕುಲದ ಮನೆ ಇದ್ದಂತೆ. ಈ ಮನೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಅರಣ್ಯ ಎಂದಿಗೂ ಮನುಷ್ಯರ ಮನೆಯಾಗಲು ಸಾಧ್ಯವಿಲ್ಲ. ನಾಡು ನಮ್ಮ ಮನೆ. ನಾಡನ್ನು ಸುರಕ್ಷಿತವಾಗಿ ಇರಿಸಿಕೊಂಡಿರುವಂತೆ ಕಾಡನ್ನೂ ಕಾಪಾಡಬೇಕು. ಇಲ್ಲದಿದ್ದರೆ ಪ್ರಾಣಿಗಳು ಕಾಡು ತೊರೆದು ನಾಡಿಗೆ ಬರುತ್ತವೆ’ ಎಂದು ಹೇಳಿದರು.

‘ಅರಣ್ಯದಲ್ಲಿ ಮಾನವಸ್ನೇಹಿ ಹಾಗೂ ಭಯಾನಕ ಪ್ರಾಣಿಗಳು ಇರುತ್ತವೆ. ಮನುಷ್ಯರು ಆಹ್ವಾನಿತರಾಗಿ ಕಾಡಿಗೆ ಹೋಗಿ ಪ್ರಾಣಿ ಪಕ್ಷಿ ಸಂಕುಲಕ್ಕೆ ಸೌಲಭ್ಯ ಕಲ್ಪಿಸಿ ಜಾಗೃತರಾಗಿ ಹಿಂದಿರುಗಬೇಕು. ಪ್ರಾಣಿ ಪಕ್ಷಿ ಸಂಕುಲಕ್ಕೆ ತೊಂದರೆ ಮಾಡಿದರೆ ಕಷ್ಟ ಎದುರಿಸಬೇಕಾಗುತ್ತದೆ’ ಎಂದರು.

ಶೇ 10ರಷ್ಟು ಯಶಸ್ಸು: ‘ಅನೇಕ ಕಾರಣಕ್ಕೆ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಕಾಳ್ಗಿಚ್ಚಿನಿಂದ ಬೆಟ್ಟ ಗುಡ್ಡದಲ್ಲಿ ಬೇಸಿಗೆಯಲ್ಲಿ ಮರ ಗಿಡಗಳು, ಪ್ರಾಣಿ ಸಂಕುಲ ನಾಶವಾಗುತ್ತಿದೆ. ಕಾಳ್ಗಿಚ್ಚಿನಿಂದ ಅರಣ್ಯ ಸಂರಕ್ಷಣೆ ಮಾಡಬೇಕು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ಶ್ರೀನಿವಾಸರಾವ್ ಸಲಹೆ ನೀಡಿದರು.

‘ಮರಗಳನ್ನು ರಕ್ಷಿಸುವುದರ ಜತೆಗೆ ಮತ್ತಷ್ಟು ಸಸಿಗಳನ್ನು ನೆಟ್ಟು, ಪೋಷಿಸಿ ಬೆಳೆಸಿದರೆ ಜಿಲ್ಲೆ ಮಲೆನಾಡ ಪ್ರದೇಶವಾಗುತ್ತದೆ. ಅರಣ್ಯ ಸಂಪತ್ತು ವೃದ್ಧಿಸಿದರೆ ಮಳೆ ಪ್ರಮಾಣ ಹೆಚ್ಚಿ ಜಿಲ್ಲೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಖಾಲಿ ಜಾಗಗಳಲ್ಲಿ ಸಸಿ ಬೆಳೆಸಲು ಯೋಜನೆ ರೂಪಿಸಲಾಗಿದೆ’ ಎಂದು ವಿವರಿಸಿದರು.

‘ಹಿಂದಿನ ವರ್ಷ ಜಿಲ್ಲೆಯ ವಿವಿಧೆಡೆ 8 ಲಕ್ಷ ಬೀಜದುಂಡೆ ಬಿತ್ತನೆ ಮಾಡಲಾಗಿತ್ತು. ಆದರೆ, ಬೀಜದುಂಡೆ ಪ್ರಯತ್ನದಲ್ಲಿ ಶೇ 10ರಷ್ಟು ಮಾತ್ರ ಯಶಸ್ಸು ಗಳಿಸಿದ್ದೆವು. ಈ ಬಾರಿ ಹೊಸ ರೀತಿಯಲ್ಲಿ ಬೀಜ ನಾಟಿ ಮಾಡಲಾಗುತ್ತಿದ್ದು, ಸಂಪೂರ್ಣ ಯಶಸ್ಸು ಸಿಗುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

1 ಲಕ್ಷ ಬೀಜ: ‘ಅಂತರಗಂಗೆ ಬೆಟ್ಟವನ್ನು ಹಸಿರುಮಯವಾಗಿಸಲು ಬೀಜಾಮೃತ ಲೇಪಿತ ಒಂದು ಲಕ್ಷ ಬೀಜಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ಹೊಂಗೆ, ಬೇವು, ಹುಣಸೆ, ಹಿಪ್ಪೆ, ಅಂಟುವಾಳ, ತೊರೆ ಮತ್ತಿಯ 1 ಲಕ್ಷ ಬೀಜಗಳನ್ನು ನಾಟಿ ಮಾಡಲಾಗುತ್ತದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಮುಕುಂದರಾವ್ ಮಾಹಿತಿ ನೀಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಸಮರ್ಥ ಭಾರತ ಟ್ರಸ್ಟ್, ಮಹಿಳಾ ಸಮಾಜ ಕಾಲೇಜು ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡು ಬೀಜ ನಾಟಿ ಮಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸಮರ್ಥ ಭಾರತ ಟ್ರಸ್ಟ್ ಅಧ್ಯಕ್ಷ ತ್ಯಾಗರಾಜ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವಸಂತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಂಘಟನಾ ಆಯುಕ್ತ ವಿ.ಬಾಬು, ಮುದುವತ್ತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್‌ಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !