ಗೌಡರು ಅಷ್ಠಮಠಗಳ ವಿಶೇಷ ಅಭಿಮಾನಿ

7
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಮತ

ಗೌಡರು ಅಷ್ಠಮಠಗಳ ವಿಶೇಷ ಅಭಿಮಾನಿ

Published:
Updated:

ಬಾಗಲಕೋಟೆ: ‘ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಅಷ್ಠ ಮಠಗಳ ವಿಶೇಷ ಅಭಿಮಾನಿ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಲ್ಲರೂ ಉಡುಪಿ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮಾತ್ರ ಬರಲಿಲ್ಲ. ಹಾಗೆಂದು ಕಾಂಗ್ರೆಸ್‌ ಎಂದರೆ ಅವರೊಬ್ಬರೇ ಅಲ್ಲ. ಎಚ್.ಕೆ.ಪಾಟೀಲ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಹೀಗೆ ಹಲವು ನಾಯಕರಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಮಠದ ಭಕ್ತರು ಇದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಅನ್ಯಾಯವಾಗಿದೆ ಎಂಬ ಕಾರಣ ನೀಡಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತುವುದು ಸರಿಯಲ್ಲ. ವೀರಶೈವ ಹಾಗೂ ಲಿಂಗಾಯತರು ಹೇಗೆ ಒಂದೇ ಆಗಿದ್ದಾರೊ ಅದೇ ರೀತಿ, ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎರಡೂ ಒಂದೇ ಆಗಿವೆ. ನಾವು ಜೋಡಣೆ ಮಾಡುತ್ತೇವೆ ಹೊರತು ಒಡೆಯುವ ವಿಚಾರಕ್ಕೆ ಬೆಂಬಲ ನೀಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು.

‘ರಾಮ ಜನ್ಮಭೂಮಿ ವಿವಾದ ವಿಚಾರ ಸುಪ್ರಿಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಹಾಗಾಗಿ ಮಂದಿರ ನಿರ್ಮಾಣ ವಿಚಾರದಲ್ಲಿ ಕಾನೂನು ಮೀರಿ ಹೋಗಲು ಆಗುವುದಿಲ್ಲ’ ಎಂದರು. ‘ಮಧ್ವಾಚಾರ್ಯರ ಜನ್ಮಸ್ಥಳ ಉಡುಪಿ ಜಿಲ್ಲೆ ಪಾಜಕದಲ್ಲಿ ಹಿಂದೂ ಧರ್ಮದ ಶಿಕ್ಷಣ ನೀಡಲು ಆನಂದತೀರ್ಥ ಹೆಸರಿನ ಮಹಾವಿದ್ಯಾಲಯ ಆರಂಭಿಸಲಾಗುತ್ತಿದೆ’ ಎಂದು ಹೇಳಿದ ಶ್ರೀಗಳು, ‘ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೂ ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಅಲ್ಲಿ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯ ಜೊತೆಗೆ ಲೌಕಿಕ ಶಿಕ್ಷಣ ಕೂಡ ನೀಡಲಾಗುವುದು. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವೈದಿಕ ಶಿಕ್ಷಣ ನೀಡುವುದಾಗಿ’ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !