ದಲಿತರನ್ನು ಹತ್ತಿಕ್ಕಲು ಸೃಷ್ಟಿಸಿದ ಅಸ್ತ್ರ ಜಾತಿ ವ್ಯವಸ್ಥೆ

7
ಪ್ರೊ .ಬಿ. ಕೃಷ್ಣಪ್ಪ ಜಯಂತ್ಯುತ್ಸವದಲ್ಲಿ ದಸಂಸ ಸಂಸ್ಥಾಪಕ ಸದಸ್ಯ ಶ್ರೀಧರ್‍ ಕಲಿವೀರ್‍

ದಲಿತರನ್ನು ಹತ್ತಿಕ್ಕಲು ಸೃಷ್ಟಿಸಿದ ಅಸ್ತ್ರ ಜಾತಿ ವ್ಯವಸ್ಥೆ

Published:
Updated:
ಹರಿಹರದ ಹೊರವಲಯದಲ್ಲಿರುವ ಮೈತ್ರಿವನದ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರೊ.ಬಿ. ಕೃಷ್ಣಪ್ಪ ಅವರ ಜಯಂತ್ಯೋತ್ಸವದ ಅಂಗವಾಗಿ ಮಂಗಳವಾರ ನಡೆದ ಸ್ವಾಭಿಮಾನ ಚೈತನ್ಯ ಸಮಾವೇಶವನ್ನು ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಉದ್ಘಾಟಿಸಿದರು.

ಹರಿಹರ: ವರ್ಣ ಹಾಗೂ ಜಾತಿ ವ್ಯವಸ್ಥೆಗಳು ಮೂಲನಿವಾಸಿಗಳನ್ನು ಸದೆಬಡಿಯಲು ಆರ್ಯರು ಮನುವಾದದ ಮೂಲಕ ಸೃಷ್ಟಿಸಿದ ಅಸ್ತ್ರ ಎಂದು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಶ್ರೀಧರ್‍ ಕಲಿವೀರ್‍ ಅಭಿಪ್ರಾಯಪಟ್ಟರು.

ಇಲ್ಲಿನ ಪ್ರೊ.ಬಿ. ಕೃಷ್ಣಪ್ಪ ಅವರ ಸಮಾಧಿ ಸ್ಥಳದಲ್ಲಿರುವ ಮೈತ್ರಿವನದ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ನಡೆದ ಪ್ರೊ .ಬಿ. ಕೃಷ್ಣಪ್ಪ ಜಯಂತ್ಯುತ್ಸವದ ಅಂಗವಾಗಿ ಮಂಗಳವಾರ ನಡೆದ ಸ್ವಾಭಿಮಾನ ಚೈತನ್ಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಮೂಲನಿವಾಸಿಗಳಾದ ದ್ರಾವಿಡ ಹಾಗೂ ನಾಗ ಜನಾಂಗಗಳಿಂದ ವಿದ್ಯೆ, ಅಧಿಕಾರ, ಸಾಮಾಜಿಕ ಸಮಾನತೆ ಹಾಗೂ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳಲು ಆರ್ಯರು ಮನು ಸಂಸ್ಕೃತಿಯ ಮೂಲಕ ಜಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಶತಮಾನಗಳ ಕಾಲ ನಡೆದ ಶೋಷಣೆಯ ವಿರುದ್ಧ ನಡೆದ ಹೋರಾಟವನ್ನು ಜಗತ್ತು ಮಾನವ ಇತಿಹಾಸದ ಹೆಸರಿನಲ್ಲಿ ಅಧ್ಯಯನ ಮಾಡುತ್ತಿದೆ ಎಂದು ತಿಳಿಸಿದರು.

ಶೋಷಿತರು ಆಡಳಿತ ಚುಕ್ಕಾಣಿ ಹಿಡಿದಾಗ, ಮಾತ್ರ ಶೋಷಿತರ ಅಭಿವೃದ್ಧಿ ಸಾಧ್ಯ ಎಂಬ ಪರಿಕಲ್ಪನೆಯಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜನಸಂಖ್ಯೆ ಆಧಾರದಲ್ಲಿ ಅಧಿಕಾರ ಹಂಚಿಕೆ ಮತ್ತು ಮೀಸಲಾತಿ ಜಾರಿಗೆ ಶಿಫಾರಸ್ಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತರು ರಾಜಕೀಯ ಶಕ್ತಿ ಹಾಗೂ ಹಕ್ಕುಗಳನ್ನು ಪಡೆಯಲು ರಾಜಕೀಯೇತರ ಹೋರಾಟ ಅಗತ್ಯ ಎಂಬ ಕಾರಣಕ್ಕಾಗಿ ಪ್ರೊ.ಬಿ. ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು ಎಂದು ವಿವರಿಸಿದರು.

ಪ್ರಸ್ತುತ ದಲಿತ ಸಂಘರ್ಷ ಸಮಿತಿಯು ಹಲವು ಬಣಗಳಾಗಿವೆ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಶೋಷಿತರ ಸಮಸ್ಯೆಗಳು ಸೃಷ್ಟಿಯಾದಾಗ ಬಣಗಳು ಒಗ್ಗಟ್ಟಾಗಿ ಸಮಸ್ಯೆ ಪರಿಹಾರಕ್ಕೆ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಸಮಾವೇಶ ಉದ್ಘಾಟಿಸಿದ ಸಮಿತಿಯ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ, ‘ದೇಶದಲ್ಲಿ ಕೋಮುವಾದ ತಾಂಡವವಾಡುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್‍ ಮನುವಾದಿಗಳ ಹಿಡಿತದಲ್ಲಿವೆ. ಸಂವಿಧಾನವನ್ನು ಬದಲಿಸಬೇಕು ಎಂಬ ಮನಸ್ಥಿತಿಯಲ್ಲಿರುವ ಮೀಸಲಾತಿ ವಿರೋಧಿಗಳಾದ ಮನುವಾದಿಗಳ ವಿರುದ್ಧ ದಲಿತರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು’ ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ₹ 1,100 ಕೋಟಿ ಬಜೆಟ್‍ನಲ್ಲಿ ದಲಿತರ ಸಾಲ ಮನ್ನಾ ಸೇರಿ ದಲಿತರ ಅಭಿವೃದ್ಧಿಗೆ ಯಾವುದೇ ಯೋಜನೆ ಘೋಷಿಸಿಲ್ಲ. ಅವರು ಕೇವಲ ಒಕ್ಕಲಿಗ ಸಮಾಜದ ಬಜೆಟ್‍ನ್ನು ಮಂಡಿಸುವ ಮೂಲಕ ಇಬ್ಬಂದಿ ನೀತಿಯನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಸಂಚಾಲಕ ಹೂವಿನಮಡು ಅಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ, ರಾಜ್ಯ ಸಮಿತಿಯ ವಿ. ನಾರಾಯಣಸ್ವಾಮಿ, ಕಬ್ಬಳ್ಳಿ ಮೈಲಪ್ಪ, ಕೃಷ್ಣಮೂರ್ತಿ ಚಮರಂ, ಹುಚ್ಚಂಗಿ ಪ್ರಸಾದ್, ಪುಣಬಗಟ್ಟೆ ನಿಂಗಪ್ಪ, ಆಲೂರು ನಿಂಗರಾಜ್, ಎಚ್.ಎನ್. ಸುನಂದಕುಮಾರ್, ಎಂ. ದೇವದಾಸ್, ಭಾಗ್ಯಮ್ಮ, ಮಂಜುನಾಥ್ ಅವರೂ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !