ಕನ್ನಡ ಶಾಲೆಗಳ ವಿಲೀನಕ್ಕೆ ಜಾಗೃತ ಸಮಿತಿ ವಿರೋಧ

7

ಕನ್ನಡ ಶಾಲೆಗಳ ವಿಲೀನಕ್ಕೆ ಜಾಗೃತ ಸಮಿತಿ ವಿರೋಧ

Published:
Updated:

ದಾಂಡೇಲಿ: ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಹತ್ತಿರದ ಶಾಲೆಗಳಲ್ಲಿ ವಿಲೀನಗೊಳಿಸುವ ಮೂಲಕ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿಲುವು ಖಂಡನೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರಚಿತವಾಗಿರುವ ಜಿಲ್ಲಾ ಕನ್ನಡ ಜಾಗೃತ ಸಮಿತಿಯ ಸದಸ್ಯ ಡಾ. ವಿಠ್ಠಲ ಭಂಡಾರಿ ಹಾಗೂ ಬಿ.ಎನ್. ವಾಸರೆ ಹೇಳಿದ್ದಾರೆ. ತಕ್ಷಣ ಈ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಮಂಡಿಸಿದ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ, ರಾಜ್ಯದಲ್ಲಿ ಕಡಿಮೆ ಹಾಜರಾತಿಯಿರುವ 28ಸಾವಿರಕ್ಕೂ ಆಧಿಕ ಸರ್ಕಾರಿ ಕನ್ನಡ ಶಾಲೆಗಳ ವಿಲೀನದ ಪ್ರಸ್ತಾಪ ಮಾಡಿದ್ದಾರೆ. ಇದು ರಾಜ್ಯದ ಹಿತಾಸಕ್ತಿಗೆ ಹಾಗೂ ಕನ್ನಡ ಭಾಷೆಯ ಉಳಿವಿಗೆ ತೀರಾ ವ್ಯತಿರಿಕ್ತವಾಗಿದೆ. ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಕಾರ್ಯಯೋಜನೆಗಳನ್ನು ರೂಪಿಸಬೇಕೇ ವಿನಾ ಶಾಲೆಗಳನ್ನೇ ಬಂದ್ ಮಾಡುವುದು ಸರಿಯಾದ ಕ್ರಮವಲ್ಲ. ಶಾಲೆಗಳ ಮೂಲ ಸೌಕರ್ಯ ಹೆಚ್ಚಿಸಬೇಕು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಕೊರತೆ ಇರುವುದಕ್ಕೆ ಸರ್ಕಾರದ ಕೆಲ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಕಾರ, ಸರ್ಕಾರಿ ಶಾಲೆ ಹಾಗೂ ಮಾತೃಭಾಷಾ ಶಿಕ್ಷಣದ ಬಗ್ಗೆ ಬದ್ಧತೆ ಪ್ರದರ್ಶಿಸಬೇಕಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

1000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಹೊರಟಿರುವುದು ದೂರಗಾಮಿಯಾಗಿ ಕನ್ನಡಕ್ಕೆ ತೀರಾ ಅಪಾಯಕಾರಿಯಾದದ್ದು. ಕನ್ನಡ ಮಾದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯ ಸರ್ಕಾರದಿಂದ ಆಗಬೇಕಾಗಿರುವುದರಿಂದ ಬಜೆಟ್ ಅಧಿವೇಶನದಲ್ಲಿ ಮಂಡಿಸಿದ ಪ್ರಸ್ತಾವವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿಯೂ ಈ ಬಗ್ಗೆ ಹೋರಾಟ ನಡೆಸುವುದು ಅನಿವಾರ್ಯ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !