ನಗರೋತ್ಥಾನ ಕಾಮಗಾರಿ ಆರಂಭಕ್ಕೆ ಒತ್ತಾಯ

7
ಜಿಲ್ಲಾಧಿಕಾರಿ ಕಚೇರಿ ಎದುರು ನಗರಸಭಾ ಸದಸ್ಯರ ಧರಣಿ

ನಗರೋತ್ಥಾನ ಕಾಮಗಾರಿ ಆರಂಭಕ್ಕೆ ಒತ್ತಾಯ

Published:
Updated:
ಮೂರನೇ ಹಂತದ ನಗರೋತ್ಥಾನ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ನಗರಸಭೆ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಕೋಲಾರ: ಮೂರನೇ ಹಂತದ ನಗರೋತ್ಥಾನ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ನಗರಸಭೆ ಸದಸ್ಯರು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಮೂರನೇ ಹಂತದ ನಗರೋತ್ಥಾನ ಕಾಮಗಾರಿಗಳಿಗೆ ಸರ್ಕಾರದಿಂದ ₹ 35 ಕೋಟಿ ಬಿಡುಗಡೆಯಾಗಿದೆ. ಆದರೆ, ಅಧಿಕಾರಿಗಳು ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ವಿಳಂಬ ಮಾಡಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ನಗರಸಭೆ ಅಧಿಕಾರಿಗಳು ಮತ್ತು ನಗರೋತ್ಥಾನ ಅನುಷ್ಠಾನ ಅಧಿಕಾರಿಗಳ ನಡುವೆ ಸಮನ್ವಯವಿಲ್ಲ. ಹೀಗಾಗಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ಬಗ್ಗೆ ಚರ್ಚಿಸಲು ನಿಯಮಾನುಸಾರ ಸಾಮಾನ್ಯ ಸಭೆಗಳೇ ನಡೆಯುತ್ತಿಲ್ಲ. ನಗರದಲ್ಲಿ ಮೂಲಸೌಕರ್ಯ ಸಮಸ್ಯೆ ಗಂಭೀರವಾಗಿದ್ದು, ಜನರಿಗೆ ಉತ್ತರಿಸಲು ಸಾಧ್ಯವಾಗದೆ ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಎರಡನೇ ವಾರ್ಡ್‌ ಸದಸ್ಯ ನಾರಾಯಣಸ್ವಾಮಿ ಹೇಳಿದರು.

‘ಮೂಲಸೌಕರ್ಯ ಸಮಸ್ಯೆ ನಿವಾರಣೆಗೆ ನಗರೋತ್ಥಾನದ ಅನುದಾನ ಬಳಸಬೇಕು. ಆದರೆ, ಅಧಿಕಾರಿಗಳು ಸಾಕಷ್ಟು ವಿಳಂಬ ಮಾಡಿ ಅಂತಿಮ ಕ್ಷಣದಲ್ಲಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆಸಿದ್ದಾರೆ. ಆದರೆ, ಗುತ್ತಿಗೆದಾರರು ಟೆಂಡರ್‌ ಪೂರ್ಣಗೊಂಡು ನಾಲ್ಕೈದು ತಿಂಗಳು ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗುವ ಆತಂಕ ಎದುರಾಗಿದೆ’ ಎಂದು ತಿಳಿಸಿದರು.

ದುರಸ್ತಿ ಮಾಡಿಲ್ಲ: ‘ವಿವಿಧ ಬಡಾವಣೆಗಳಲ್ಲಿ ಕೊಳವೆ ಬಾವಿಗಳ ಪಂಪ್‌ ಮತ್ತು ಮೋಟರ್‌ಗಳು ಕೆಟ್ಟಿದ್ದು, ಅಧಿಕಾರಿಗಳು ಅವುಗಳನ್ನು ದುರಸ್ತಿ ಮಾಡಿಲ್ಲ. ನೀರಿನ ಕೊರತೆಯಿಂದ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಮರು ಆರಂಭಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕಸದ ಸಮಸ್ಯೆಯಿಂದ ಇಡೀ ನಗರ ಗಬ್ಬೆದ್ದು ನಾರುತ್ತಿದೆ’ ಎಂದು ಧರಣಿನಿರತ ಸದಸ್ಯರು ಆರೋಪಿಸಿದರು.

‘ನಗರೋತ್ಥಾನ ಅನುದಾನ ಸದ್ಬಳಕೆ ಮಾಡುವುದು ಜಿಲ್ಲಾಧಿಕಾರಿ ಜವಾಬ್ದಾರಿ. ಜಿಲ್ಲಾಧಿಕಾರಿಯು ಅಧಿಕಾರಿಗಳ ಸಭೆ ನಡೆಸಿ ಅನುದಾನ ವೆಚ್ಚದ ಬಗ್ಗೆ ಸಂಗ್ರಹಿಸಬೇಕು. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸೂಚನೆ ಭರವಸೆ: ಧರಣಿನಿರತರನ್ನು ಭೇಟಿಯಾದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ‘ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ನಡೆಸಿ 15 ದಿನದೊಳಗೆ ನಗರೋತ್ಥಾನ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯರಾದ ವೆಂಕಟೇಶ್‌ಪತಿ, ನವಾಜ್, ಸಿ.ಸೋಮಶೇಖರ್, ಮೋಹನ್ ಬಾಬು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !