ಅಕ್ರಮ ಸಕ್ರಮ ಅರ್ಜಿ ಮಾಹಿತಿಗೆ ಸೂಚನೆ

7
ಅರ್ಜಿ ತ್ವರಿತವಾಗಿ ವಿಲೇವಾರಿ ಮಾಡಿ: ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಹೇಳಿಕೆ

ಅಕ್ರಮ ಸಕ್ರಮ ಅರ್ಜಿ ಮಾಹಿತಿಗೆ ಸೂಚನೆ

Published:
Updated:
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಕೋಲಾರದಲ್ಲಿ ಶುಕ್ರವಾರ ಕಂದಾಯ ಅಧಿಕಾರಿಗಳ ಸಭೆ ನಡೆಸಿದರು.

ಕೋಲಾರ: ‘ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ ಸಂಬಂಧ ತಹಶೀಲ್ದಾರ್‌ಗಳು ಜುಲೈ 25ರೊಳಗೆ ಸಮಗ್ರ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ (ಪ್ರಭಾರ) ಶುಭಾ ಕಲ್ಯಾಣ್‌ ಸೂಚಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಅಕ್ರಮ ಸಕ್ರಮ ಅರ್ಜಿಗಳನ್ನು ಬಾಕಿ ಇರಿಸಿಕೊಳ್ಳದೆ ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ. ಸಭೆ ದಿನಾಂಕದೊಳಗೆ ಅರ್ಜಿಗಳು ವಿಲೇವಾರಿ ಆಗಿರಬೇಕು’ ಎಂದರು.

‘ಯಾವುದೇ ಆಕ್ಷೇಪಣೆ ಇಲ್ಲದ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡಿ. ವಿಳಂಬ ಮಾಡುವುದರಿಂದ ಅಧಿಕಾರಿಗಳಿಗೆ ಏನಾದರೂ ಲಾಭ ಬರುತ್ತದೆಯೇ? ಸ್ಥಳಕ್ಕೆ ಪರಿಶೀಲನೆ ನಡೆಸಿದರೆ ಕೆಲಸ ಬೇಗ ಆಗುತ್ತದೆ. ಕಚೇರಿಯಲ್ಲೇ ಕುಳಿತರೆ ಏನೂ ಪ್ರಯೋಜನವಿಲ್ಲ. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರನ್ನು ನೆಚ್ಚಿಕೊಂಡರೆ ಅರ್ಜಿಗಳು ಕೊಠಡಿಯಲ್ಲೇ ಕೊಳೆಯುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಂಜೂರಾಗಿರುವ ಹಕ್ಕುಪತ್ರಗಳನ್ನು ಅಂಚೆ ಮೂಲಕ ಫಲಾನುಭವಿಗಳಿಗೆ ತಲುಪಿಸಿ. ಅದೇ ರೀತಿ ಸಾಗುವಳಿ ಚೀಟಿಗಳನ್ನು ಪರಿಶೀಲಿಸಿ ರೈತರಿಗೆ ವಿತರಿಸಬೇಕು. ಯಾವುದೇ ಗೊಂದಲವಿದ್ದರೆ ಸ್ಥಳಕ್ಕೆ ಭೇಟಿ ನೀಡಿ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಖಚಿತಪಡಿಸಿಕೊಂಡ ನಂತರವಷ್ಟೇ ಅರ್ಜಿ ವಿಲೇವಾರಿ ಮಾಡಿ’ ಎಂದು ಸಲಹೆ ನೀಡಿದರು.

ತ್ವರಿತವಾಗಿ ಮಾಡಿ: ‘ಮುಖ್ಯಮಂತ್ರಿಯವರು ಸದ್ಯದಲ್ಲೇ ಕಂದಾಯ ಅಧಿಕಾರಿಗಳ ಸಭೆ ಕರೆಯಲಿದ್ದು, ಅವರಿಗೆ ಸಮರ್ಪಕ ಮಾಹಿತಿ ನೀಡಬೇಕು. ಆದ ಕಾರಣ ಬಾಕಿ ಕೆಲಸಗಳನ್ನು ತ್ವರಿತವಾಗಿ ಮಾಡಿ. ನಿಖರ ಮಾಹಿತಿ ಮತ್ತು ವರದಿಗಳನ್ನು ಅಂಕಿ ಅಂಶ ಸಮೇತ ನೀಡಬೇಕು. ಯಾವುದೇ ಕಾರಣಕ್ಕೂ ಪರಿಶೀಲನೆ ನಡೆಸದೆ ಸುಳ್ಳು ವರದಿ ನೀಡಬಾರದು’ ಎಂದು ಸೂಚಿಸಿದರು.

‘ತಹಸೀಲ್ದಾರ್‌ಗಳು ಭೂವಿವಾದಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ 9 ನಾಡ ಕಚೇರಿಗಳು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಉಳಿದ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ತಹಶೀಲ್ದಾರ್‌ಗಳು ಸರ್ಕಾರಿ ಜಾಗ ಗುರುತಿಸಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್‌ಗೆ ತರಾಟೆ: ‘ನೂತನ ಕೆಜಿಎಫ್‌ ತಾಲ್ಲೂಕಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಹೇಳಿ ತಿಂಗಳುಗಳೇ ಕಳೆದಿವೆ. ಆದರೂ ಈ ಬಗ್ಗೆ ಗಮನ ಹರಿಸಿಲ್ಲ. ಆಸಕ್ತಿಯಿಂದ ಕೆಲಸ ಮಾಡಬೇಕು. ಸಭೆಗೆ ಬರುವಾಗ ಸಮಗ್ರ ಮಾಹಿತಿ ತರಬೇಕು ಎಂಬುದು ಗೊತ್ತಿಲ್ಲವೆ’ ಎಂದು ಕೆಜಿಎಫ್‌ ತಹಶೀಲ್ದಾರ್‌ ಶಂಕರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಕೆರೆ ಮತ್ತು ರಾಜಕಾಲುವೆಗಳ ಸರ್ವೆ ಮಾಡಬೇಕು. ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಬೇಕು. ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದಲ್ಲಿರುವ ಸರ್ಕಾರ ಜಮೀನುಗಳನ್ನು ಗುರುತಿಸಿ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು ಮತ್ತು ಸರ್ಕಾರದ ಆಸ್ತಿ ಎಂದು ನಾಮಫಲಕ ಹಾಕಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !