ಮಂಗಳವಾರ, ಸೆಪ್ಟೆಂಬರ್ 17, 2019
21 °C

ಐಎಎಸ್ ಕನಸಾದರೆ ಸಾಲದು

Published:
Updated:
ಐಎಎಸ್ ಕನಸಾದರೆ ಸಾಲದು

ಗುಲ್ಬರ್ಗ: ಐಎಎಸ್, ಐಎಸ್ ಪರೀಕ್ಷೆ ಬರೆಯುತ್ತೇನೆ ಎಂದು ಹಗಲು ಕನಸು ಕಾಣುತ್ತಿದ್ದರೆ ಫಲ ದೊರೆಯುವುದಿಲ್ಲ. ಸತತ ಪರಿಶ್ರಮವೂ ಮುಖ್ಯವಾಗುತ್ತದೆ ಎಂದು ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ರವಿ  ಎಸ್. ಭಾನುವಾರ ಇಲ್ಲಿ ಹೇಳಿದರು.ಗುಲ್ಬರ್ಗದಲ್ಲಿ ಯುನಿವರ್ಸಲ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಉದ್ಘಾಟಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.ಐಎಎಸ್ ಬರೆಯಬೇಕೆನ್ನುವವರು ಮನದಾಳದಲ್ಲಿ ಮೊದಲು ಗುಟ್ಟಾಗಿ ಗುರಿ ಇಟ್ಟುಕೊಳ್ಳಬೇಕು. ಅಧ್ಯಯನ ಮುಂದುವರಿಸಿದರೆ ಆತ್ಮವಿಶ್ವಾಸ ತನ್ನಿಂತಾನೆ ಹುಟ್ಟಿಕೊಳ್ಳುತ್ತದೆ. ವಿಭಿನ್ನವಾದುದ್ದನ್ನು ಸಾಧಿಸಬೇಕೆನ್ನುವ ವಿಶ್ವಾಸ ಗಟ್ಟಿಗೊಳಿಸಿಕೊಂಡರೆ ಯಶಸ್ಸು ಸಾಧ್ಯವಾಗುತ್ತದೆ ಎಂದರು.ದಿನ ಪತ್ರಿಕೆ, ನಿಯತಕಾಲಿಕೆ ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು. ಇದರಿಂದ ಸಾಮಾನ್ಯ ಜ್ಞಾನ ವೃದ್ಧಿಸುತ್ತದೆ. ಅಧ್ಯಯನಕ್ಕೆ ಸಮಯ, ಕಠಿಣ ಪರಿಶ್ರಮ ಹಾಗೂ ವ್ಯವಸ್ಥಿತ ಅಧ್ಯಯನ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು. ಉತ್ತಮ ಮಾರ್ಗದರ್ಶನ ನೀಡುವವರಿಂದ ಅನುಕೂಲ ಪಡೆದುಕೊಂಡು ಗುರಿ ಸಾಧಿಸಬೇಕು. ವೇಳೆ ಹಾಳು ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಬೆಂಗಳೂರು ಯುನಿವರ್ಸಲ್ ಕೋಚಿಂಗ್ ಸೆಂಟರ್ ನಿರ್ದೇಶಕ ಉಪೇಂದ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, `ಹತ್ತು ವರ್ಷಗಳಿಂದ ಯುನಿವರ್ಸಲ್ ಕೇಂದ್ರವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ತರಬೇತಿ ನೀಡುತ್ತಿದೆ. ಈ ಕೇಂದ್ರದ ಮೂಲಕ 110 ಐಎಎಸ್, 140 ಕೆಎಎಸ್ ಹಾಗೂ 2000 ಇನ್ನಿತರೆ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ.ಹೈ.ಕ. ಭಾಗದ ಒತ್ತಾಯದ ಮೆರೆಗೆ ಗುಲ್ಬರ್ಗದಲ್ಲಿ ನೂತನ ಶಾಖೆಯನ್ನು ಆರಂಭಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, `ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡಬೇಕು~ ಎಂದು ಕಿವಿಮಾತು ಹೇಳಿದರು.ಎಚ್‌ಕೆಇಎಸ್ ನಿರ್ದೇಶಕ ಶಿವಶರಣಪ್ಪ ಸೀರಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು ಹೆಚ್ಚುಹೆಚ್ಚು ಐಎಎಸ್, ಕೆಎಎಸ್ ಪರೀಕ್ಷೆಗಳಲ್ಲಿ ಪಾಸಾಗಬೇಕು. ಪ್ರತಿಭಾವಂತರಿಗೆ ಅಗತ್ಯವಾದ ಎಲ್ಲ ನೆರವು ನೀಡಲು ಸದಾ ಸಿದ್ಧ ಎಂದರು.ರಮೇಶ ಅವರು `ಭಾರತೀಯ ಸಂವಿಧಾನ~ದ ಕುರಿತು ವಿವರಿಸಿದರು. ವಿನಯ ಬೆಂಗಳೂರು `ಐಎಎಸ್ ನೂತನ ಪಠ್ಯಕ್ರಮ~ದ ವಿವರಣೆ ನೀಡಿದರು.ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜು ತೆಗ್ಗಳ್ಳಿ, ಉಪನ್ಯಾಸಕ ನರೇಂದ್ರ ಬಡಶೆಶಿ ನಿರೂಪಿಸಿದರು. ಗುಲ್ಬರ್ಗ ಯುನಿವರ್ಸಲ್ ಶಾಖೆಯ ನಿರ್ದೇಶಕಿ ರಶ್ಮಿ ಸಂತೋಷ ಮೆಟಗಾರ ಸ್ವಾಗತಿಸಿದರು. ರಮೇಶ ವಂದಿಸಿದರು.

Post Comments (+)