ನಟರಲ್ಲ ಸಾಧಕರ ಆದರ್ಶ ಪಾಲಿಸಿ

7
‘ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ’ ಕಾರ್ಯಕ್ರಮದಲ್ಲಿ ಯಲುವಹಳ್ಳಿ ಸೊಣ್ಣೇಗೌಡ ಅಭಿಮತ

ನಟರಲ್ಲ ಸಾಧಕರ ಆದರ್ಶ ಪಾಲಿಸಿ

Published:
Updated:
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಎಚ್ ನರಸಿಂಹಯ್ಯ ಅವರನ್ನು ಸನ್ಮಾನಿಸಲಾಯಿತು.

ಚಿಕ್ಕಬಳ್ಳಾಪುರ: ‘ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯುವ ಸಮುದಾಯ ಸಿನಿಮಾ ನಟರು, ಕ್ರಿಕೆಟ್ ಆಟಗಾರನ್ನು ಮಾದರಿಯಾಗಿಟ್ಟುಕೊಳ್ಳದೆ ಸಮಾಜದ ಸುಧಾರಣೆಗೆ ಕೊಡುಗೆ ನೀಡಿದ ಮಹನೀಯರನ್ನು ಮಾದರಿಯಾಗಿಟ್ಟುಕೊಂಡು ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

ನಗರದ ಆಕಾಶ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೀವನ ರೂಪಿಸಿಕೊಳ್ಳಲು ಯಾವುದೇ ಭಾಷೆ ಕಲಿಯಿರಿ. ಆದರೆ, ಬಳಕೆಯಲ್ಲಿ ಮಾತ್ರ ಕನ್ನಡ ಭಾಷೆಯ ಪ್ರೀತಿಯನ್ನು ಎತ್ತಿ ಹಿಡಿಯಿರಿ. ವಿದ್ಯಾರ್ಥಿಗಳು ನಟರು, ಆಟಗಾರರನ್ನು ಅನುಕರಣೆ ಮಾಡುತ್ತ, ಅವರಂತೆ ವಸ್ತ್ರವಿನ್ಯಾಸ, ಕೇಶವಿನ್ಯಾಸ ಮಾಡಿಸಿಕೊಳ್ಳುವುದು ಶೋಭೆಯಲ್ಲ. ಶೋಕಿಯಿಂದ ನಮ್ಮ ಸಂಸ್ಕೃತಿ ನಾಶವಾಗುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕಿದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ನಿರಂತರ ಓದು, ಕಲಿಕೆಯಿಂದ ಮಾತ್ರ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಇವತ್ತು ಶಿಕ್ಷಣ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕಿದೆ. ಕೇವಲ ಅಂಕಕ್ಕಾಗಿ ಶಿಕ್ಷಣ ಪಡೆದರೆ ಅರ್ಥವಿಲ್ಲ. ಇದನ್ನು ಬೋಧಕ ವರ್ಗ ವಿದ್ಯಾರ್ಥಿ ಸಮೂಹಕ್ಕೆ ಅರ್ಥ ಮಾಡಿಸಬೇಕು’ ಎಂದರು.

ಸಾಹಿತಿ ಪಾತಮುತ್ತಕದಹಳ್ಳಿ ಚಲಪತಿಗೌಡ ಮಾತನಾಡಿ, ‘ಹಣ, ಆಸ್ತಿ, ಅಂತಸ್ತಿಗಿಂತ ವಿದ್ಯೆ ಮುಖ್ಯ. ಪೋಷಕರು ಕಷ್ಟಪಟ್ಟು ಮಕ್ಕಳನ್ನು ಶಾಲೆ, ಕಾಲೇಜಿಗೆ ಕಳುಹಿಸುತ್ತಾರೆ. ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಂಡು ಶಿಸ್ತಿನಿಂದ ಓದಬೇಕು. ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಬಹಳ ಮುಖ್ಯವಾದ ಹಂತ. ಈ ಹಂತದಲ್ಲಿ ಏಕಾಗ್ರತೆ, ಶ್ರದ್ಧೆಯಿಂದ ಕಲಿತರೆ ಉನ್ನತ ವ್ಯಾಸಂಗಕ್ಕೆ ಹಾದಿ ಸುಗಮವಾಗುತ್ತದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಎಚ್ ನರಸಿಂಹಯ್ಯ, ಎಸ್‌ಐ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜನಾರ್ಧನ್, ಆಕಾಶ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಉಪನ್ಯಾಸಕ ಪ್ರದೀಪ್ ಈಶ್ವರ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !