ಸಾಲ ಭೀತಿ; ಹಣಕ್ಕಾಗಿ 11 ವರ್ಷದ ಬಾಲಕಿಯನ್ನು ಮದುವೆ ಮಾಡಿದ ತಂದೆ

7

ಸಾಲ ಭೀತಿ; ಹಣಕ್ಕಾಗಿ 11 ವರ್ಷದ ಬಾಲಕಿಯನ್ನು ಮದುವೆ ಮಾಡಿದ ತಂದೆ

Published:
Updated:

ಲಖನೌ(ಉತ್ತರಪ್ರದೇಶ): ತಂದೆಯೊಬ್ಬರು ಸಾಲ ತೀರಿಸುವ ಸಲುವಾಗಿ 11 ವರ್ಷದ ಬಾಲಕಿಯನ್ನು 25ರ ಯುವಕನಿಗೆ ಮದುವೆ ಮಾಡಿಕೊಟ್ಟಿರುವ ಸಂಬಂಧ ಇಲ್ಲಿನ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರೇಟರ್‌ ನೋಯ‌್ಡಾದಲ್ಲಿ 2 ತಿಂಗಳ ಹಿಂದೆ ಮದುವೆ ನಡೆದಿದ್ದು, ಬಾಲಕಿಯ ತಾಯಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ.

ಪ್ರಕರಣ ಕುರಿತು ಮಾತನಾಡಿರುವ ಸರ್ಜಾಪುರ ಠಾಣಾಧಿಕಾರಿ ಮನೋಜ್‌ ಕುಮಾರ್‌ ಪಂತ್‌, ‘ಬಾಲ್ಯ ವಿವಾಹ ನಿಷೇಧ ಕಾಯ್ದೆ–2006ರ ಸೆಕ್ಷನ್‌ 9 ಮತ್ತು 10ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯ ತಂದೆ, ಪತಿ ಹಾಗೂ ಮದುವೆ ಸಿದ್ಧತೆ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ತಮ್ಮ ಕುಟುಂಬಕ್ಕೆ ಹಾಲು ಮಾರುತ್ತಿದ್ದ ವಿನೋದ್‌ ಎಂಬಾತ ಮನೆಯ ಆರ್ಥಿಕ ಸಮಸ್ಯೆ ಬಗ್ಗೆ ತಿಳಿದು ಮದುವೆಯ ಸಲಹೆ ನೀಡಿದ್ದ. ಹೀಗಾಗಿ ಉತ್ತರ ಪ್ರದೇಶದ ಬುಲಂದ್‌ಷಹರ್‌ ಜಿಲ್ಲೆಯ ಹಳ್ಳಿಯೊಂದರ ಕೃಷಿ ಕುಟುಂಬಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದೆವು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಾಲಕಿಯ ಎದೆ ಹಾಗೂ ಹಣೆಯ ಬಲ ಭಾಗದಲ್ಲಿ ಗಾಯಗಳಾಗಿವೆ.

ಸಂತಸ್ತ ಬಾಲಕಿ ‘ನನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಮನೆಗೆಲಸ ಹಾಗೂ ಜಮೀನಿನ ಕೆಲಸಕ್ಕಾಗಿ ನನ್ನನ್ನು ದುಡಿಸಿಕೊಳ್ಳುತ್ತಿದ್ದಾರೆ. ನನ್ನ ತಂದೆ–ತಾಯಿ ನನಗೆ ಮೊಬೈಲ್‌ ಕೊಡಿಸಿದ್ದರು. ಅದನ್ನು ನನ್ನಿಂದ ಕಿತ್ತುಕೊಳ್ಳಲಾಗಿದೆ. ಸಿಮ್‌ಕಾರ್ಡ್‌ ಮುರಿದು ಹಾಕಿದ್ದು, ಮನೆಯವರೊಟ್ಟಿಗೆ ಮಾತನಾಡಲು/ಭೇಟಿಮಾಡಲು ಬಿಡುವುದಿಲ್ಲ ಎಂದಿದ್ದಾರೆ. ನನ್ನನ್ನು ಕೋಣೆಯೊಂದರಲ್ಲಿ ಕೂಡಿಹಾಕಲಾಗುತ್ತಿದೆ’ ಎಂದು ಅಳಲು ತೋಡಿಕೊಂಡಿದ್ದಾಳೆ.

ಬಾಲಕಿಯ ಕುಟುಂಬ ರಸ್ತೆ ಪಕ್ಕದಲ್ಲಿ ಹೋಟೆಲ್‌ ನಡೆಸುತ್ತಿದೆ. ತಾಯಿ ಹೋಟೆಲ್‌ ಕೆಲಸ ನೋಡಿಕೊಂಡರೆ, ತಂದೆ ಹಾಲಿನ ಟ್ರಕ್‌ವೊಂದರ ಚಾಲಕರಾಗಿದ್ದರು. ಬಾಲಕಿಯ ಇಬ್ಬರು ಕಿರಿಯ ಸಹೋದರಿಯರು ತಾಯಿಗೆ ನೆರವಾಗುತ್ತಿದ್ದರು.

‘ನನ್ನ ಪತಿ ಹಗಲು–ರಾತ್ರಿ ದುಡಿಯುತ್ತಿದ್ದರು. ಕೆಲಸದ ಸಮಯದ ವಿಚಾರವಾಗಿ ಮೂರು ತಿಂಗಳ ಹಿಂದೆ ಟ್ರಕ್‌ ಮಾಲೀಕರ ಜೊತೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಅವರನ್ನು ಕೆಲಸದಿಂದ ತೆಗೆದಿದ್ದ ಮಾಲೀಕರು ₹ 12 ಸಾವಿರ ಹಣ ನೀಡುವಂತೆ ತಾಕೀತು ಮಾಡಿದ್ದರು. ಹಣ ನೀಡದಿದ್ದರೆ ಮಕ್ಕಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ದೂರು ನೀಡಿರುವ ಮಹಿಳೆ ತಿಳಿಸಿದ್ದಾರೆ.

‘ಹೋಟೆಲ್‌ಗೆ ಬರುತ್ತಿದ್ದ ವಿನೋದ್‌ಗೆ ಮನೆಯಲ್ಲಿ ಆರ್ಥಿಕ ಸಮಸ್ಯೆ ತಿಳಿದಿತ್ತು. ಆತ ತನಗೆ ಶ್ರೀಮಂತ ಕುಟುಂಬವೊಂದು ವಧು ಹುಡುಕುತ್ತಿರುವುದು ಗೊತ್ತು. ನೀವು ಮದುವೆ ಮಾಡುವುದಾದರೆ ನಿಮ್ಮ ಸಾಲವನ್ನು ತೀರಿಸುತ್ತಾರೆ ಎಂದು ಸಲಹೆ ನೀಡಿದ್ದ’

‘ಆರಂಭದಲ್ಲಿ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದೆ. ಆದರೆ ಮನೆಯ ಪರಿಸ್ಥಿತಿಯ ಕಾರಣ ಪತಿ ನನ್ನನ್ನು ಒತ್ತಾಯಿಸಿದ್ದರು. ಮದುವೆ ನಂತರ ಮಗಳನ್ನು ಸಂಪರ್ಕಿಸಲು ಆಗಲಿಲ್ಲ. ಇದೀಗ ವಾಸ್ತವದ ಅರಿವಾಗಿದೆ. ದೂರು ನೀಡಲು ಬುಲಂದ್‌ಷಹರ್‌ನ ಔರಂಗಾಬಾದ್‌ ಠಾಣೆಗೆ ತೆರಳಿದ್ದೆ. ಅವರು ಇಲ್ಲಿ ದೂರು ದಾಖಲಿಸಿಕೊಳ್ಳಲಾಗದು. ಮದುವೆ ನಡೆದ ಸ್ಥಳದಲ್ಲಿಯೇ ದೂರು ನೀಡಿ ಎಂದರು. ಹೀಗಾಗಿ ಈ ಠಾಣೆಯಲ್ಲಿ ದೂರು ನೀಡಿದ್ದೇನೆ’ ಎಂದೂ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 3

  Sad
 • 0

  Frustrated
 • 3

  Angry

Comments:

0 comments

Write the first review for this !