ದೇಶ ಕಟ್ಟುವ ಜವಾಬ್ದಾರಿ ಬದ್ಧತೆಯಿಂದ ನಿರ್ವಹಿಸಿ

7
ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಜಿ.ಪಂ ಸಿಇಒ ಲತಾಕುಮಾರಿ ಕಿವಿಮಾತು

ದೇಶ ಕಟ್ಟುವ ಜವಾಬ್ದಾರಿ ಬದ್ಧತೆಯಿಂದ ನಿರ್ವಹಿಸಿ

Published:
Updated:
Deccan Herald

ಕೋಲಾರ: ‘ಪ್ರತಿಯೊಬ್ಬರ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಶಿಕ್ಷಕರೆಂದು ಹೇಳಿಕೊಳ್ಳಲು ಹೆಮ್ಮೆಪಡಿ. ಸಮಾಜ ಹಾಗೂ ದೇಶ ಕಟ್ಟುವ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲತಾಕುಮಾರಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಶಿಕ್ಷಕರ ಗೆಳೆಯರ ಬಳಗ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಕಾಲ, ಅಭಿಪ್ರಾಯ, ಯೋಜನೆಗಳು ಬದಲಾಗಬಹುದು. ಆದರೆ, ಶಿಕ್ಷಕರ ಸಹಾಯವಿಲ್ಲದೆ ಜೀವನದಲ್ಲಿ ಮುಂದೆ ಬಂದೆ ಎಂದು ಯಾರಾದರೂ ಹೇಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

‘ಪದವಿ, ಸ್ನಾತಕೋತ್ತರ ಪದವಿ ಹಂತದಲ್ಲಿ ಶಿಕ್ಷಕರಿಲ್ಲದೆ ಕಲಿಯಬಹುದು. ಆದರೆ, ಪ್ರಾಥಮಿಕ, ಪ್ರೌಢ ಶಿಕ್ಷಣ ಹಂತದಲ್ಲಿ ಶಿಕ್ಷಕರಿಲ್ಲದೆ ಕಲಿಯುವುದು ಸಾಧ್ಯವಿಲ್ಲ. ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ ಬೋಧನಾ ವಿಧಾನ ಸುಧಾರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲೆಗೆ ಮಾದರಿ: ‘ಶಿಕ್ಷಕರ ಗೆಳೆಯರ ಬಳಗವು ಸರ್ಕಾರಿ ಶಾಲೆಗಳ 87 ಲಕ್ಷ ಮಕ್ಕಳಿಗೆ 8.97 ಲಕ್ಷ ನೋಟ್ ಪುಸ್ತಕ ವಿತರಿಸಿದೆ. ಜತೆಗೆ ಜಿಲ್ಲೆಯ 67 ಶಾಲೆಗಳಿಗೆ ನೀರು ಶುದ್ಧೀಕರಣ ಉಪಕರಣ ನೀಡಿದೆ. ಕೆಂಬೋಡಿ ಗ್ರಾಮದಲ್ಲಿ ಸ್ಯಾಮಸಂಗ್ ಕಂಪನಿಯ ಆರ್ಥಿಕ ನೆರವಿನೊಂದಿಗೆ ₹ 1.25 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸುತ್ತಿದೆ. ಬಳಗದ ಈ ಪ್ರಯತ್ನ ಜಿಲ್ಲೆಗೆ ಮಾದರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡಬಾರದು. ಬದಲಿಗೆ ಮಕ್ಕಳನ್ನೇ ದೇಶದ ಆಸ್ತಿಯಾಗಿಸಬೇಕು. ಯಾವುದೇ ಸಾಧಕರಿಗೆ ಪೋಷಕರು, ಗುರುಗಳು ಹಾಗೂ ಸ್ನೇಹಿತರ ನೆರವು ಅಗತ್ಯ. ದಡ್ಡ ಮಗು ಪ್ರಪಂಚದಲ್ಲಿಲ್ಲ. ಮಾನಸಿಕ ಅಸ್ವಸ್ಥರನ್ನು ಹೊರತುಪಡಿಸಿ ಪ್ರತಿ ಮಗುವು ಉತ್ತೀರ್ಣರಾಗಬೇಕೆಂದು ಶಿಕ್ಷಕರು ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.

‘ಶಾಲೆಗಳಲ್ಲಿ ಕೈತೋಟ ಮಾಡಿ. ಜತೆಗೆ ಶಾಲಾ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಕ್ಕಳಿಗೆ ಸ್ವಚ್ಛತೆಯ ಪಾಠ ಹೇಳಿ ಕೊಡಿ. ಶೌಚಾಲಯ ಬಳಕೆ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತಾ ಭಾವನೆ ಗಟ್ಟಿಗೊಳಿಸಿ. ನಾನು ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಅಕ್ಷರ ದಾಸೋಹ ಸೇರಿದಂತೆ ಶಾಲೆಗಳಲ್ಲಿ ಯಾವುದೇ ಸಮಸ್ಯೆ ಇರಬಾರದು’ ಎಂದು ಎಚ್ಚರಿಕೆ ನೀಡಿದರು.

ನೆರವು ಸದ್ಬಳಕೆಯಾಗಲಿ: ‘ದೊಡ್ಡ ಖಾಸಗಿ ಕಂಪನಿಗಳು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಿವೆ. ಖಾಸಗಿ ಕಂಪನಿಗಳ ಆರ್ಥಿಕ ನೆರವು ಸದ್ಬಳಕೆಯಾಗಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಹೇಳಿದರು.

ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳನ್ನು ಪುರಸ್ಕರಿಸಲಾಯಿತು. ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆ ಆಡಳಿತಾಧಿಕಾರಿ ಶಿವರಾಮರೆಡ್ಡಿ, ಸಹಾಯಕ ಸಮನ್ವಯಾಧಿಕಾರಿ ಮೈಲೇರಪ್ಪ, ಶಿಕ್ಷಣ ಇಲಾಖೆ ಸೂಪರಿಂಟೆಂಡೆಂಟ್‌ ರಾಜೇಂದ್ರ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವಿಚಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಬಿ.ಅಶೋಕ್, ಶಿಕ್ಷಕ ಗೆಳೆಯರ ಬಳಗದ ಖಜಾಂಚಿ ಚಂದ್ರಪ್ಪ, ಕಾರ್ಯದರ್ಶಿ ವೀರಣ್ಣಗೌಡ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !