ನಿವೇಶನ ಹಂಚಿಕೆಗೆ ಒತ್ತಾಯ: ಧರಣಿ

7
ನರಸಾಪುರ ಗ್ರಾಮದ ಸರ್ಕಾರಿ ಜಮೀನು ಮೀಸಲಿಡಲು ಧರಣಿನಿರತರ ಮನವಿ

ನಿವೇಶನ ಹಂಚಿಕೆಗೆ ಒತ್ತಾಯ: ಧರಣಿ

Published:
Updated:
Deccan Herald

ಕೋಲಾರ: ನಿವೇಶನರಹಿತ ದಲಿತರಿಗೆ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿನ ಸರ್ಕಾರಿ ಕರಾಬು ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ದಲಿತ ಪ್ರಜಾಸೇನೆ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

‘ದಲಿತ ಸಮುದಾಯದ ಸಾಕಷ್ಟು ಕುಟುಂಬಗಳಿಗೆ ನಿವೇಶನ ಹಾಗೂ ವಾಸಕ್ಕೆ ಮನೆ ಇಲ್ಲ. ಈ ಕುಟುಂಬಗಳ ಸದಸ್ಯರು ನಿವೇಶನ ಹಾಗೂ ವಸತಿ ಸೌಕರ್ಯಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಈ ಕುಟುಂಬಗಳ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕೆಲ ಭೂಗಳ್ಳರು ನರಸಾಪುರದ ಸರ್ಕಾರಿ ಜಮೀನು ಕಬಳಿಸುವ ಪ್ರಯತ್ನ ಮಾಡಿದ್ದರು. ಇದಕ್ಕೆ ತಡೆಯೊಡ್ಡಿದ ದಲಿತರ ಮೇಲೆ ಭೂಗಳ್ಳರು ಹಲ್ಲೆ ಮಾಡಲೆತ್ನಿಸಿದ್ದರು. ಬಳಿಕ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಜಮೀನಿನಲ್ಲಿ ದಲಿತರಿಗೆ ನಿವೇಶನ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹುಸಿಯಾಗಿದೆ’ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಂ.ಮುನಿರಾಜು ದೂರಿದರು.

‘ಭೂಗಳ್ಳರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ. ಮತ್ತೊಂದೆಡೆ ಕಂದಾಯ ಇಲಾಖೆ ಅಧಿಕಾರಿಗಳ ಲಂಚದಾಸೆಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆ. ದಲಿತರಿಗೆ ನಿವೇಶನ, ವಸತಿ ಸೌಕರ್ಯವಿಲ್ಲದೆ ಬೀದಿ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಸರ್ಕಾರಕ್ಕೆ ವಸತಿರಹಿತರ ಕಷ್ಟದ ಅರಿವಿಲ್ಲ’ ಎಂದು ಹೇಳಿದರು.

ತಹಶೀಲ್ದಾರ್‌ ವಿಫಲ: ‘ನರಸಾಪುರ ಗ್ರಾಮದ ಸರ್ಕಾರಿ ಜಮೀನು ಅತಿಕ್ರಮಿಸಿಕೊಂಡಿರುವ ವ್ಯಕ್ತಿಗಳು ಸ್ಥಳೀಯರನ್ನು ದಲಿತರ ವಿರುದ್ಧ ಎತ್ತಿಕಟ್ಟಿ ದೌರ್ಜನ್ಯ ನಡೆಸುತ್ತಿದ್ದಾರೆ. ವೇಮಗಲ್‌ ಠಾಣೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಒತ್ತುವರಿದಾರರ ದೌರ್ಜನ್ಯ ಮುಂದುವರಿದಿದೆ. ತಹಶೀಲ್ದಾರ್‌ ಸರ್ಕಾರಿ ಜಮೀನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

ಪ್ರಕರಣ ದಾಖಲಿಸಬೇಕು: ‘ಜಮೀನಿನ ಒತ್ತುವರಿ ತೆರವುಗೊಳಿಸಿ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಭೂ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜಮೀನನ್ನು ನಿವೇಶನರಹಿತ ದಲಿತರ ಕುಟುಂಬಗಳ ವಸತಿ ಸೌಕರ್ಯಕ್ಕೆ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾಗೇಶ್, ಬಹುಜನ ಶಕ್ತಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್, ದಲಿತ ಮುಖಂಡರಾದ ನಾರಾಯಣಸ್ವಾಮಿ, ಟಿ.ವಿಜಿಕುಮಾರ್‌, ವೆಂಕಟೇಶ್, ಜಿ.ಯಲ್ಲಪ್ಪ, ರಮೇಶ್, ಸಂತೋಷ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !