ಉಪನ್ಯಾಸಕರಿಗೆ ನಿರಂತರ ಕಲಿಕೆ ಅಗತ್ಯ

7
ತರಬೇತಿ ಕಾರ್ಯಗಾರದಲ್ಲಿ ಡಿಡಿಪಿಯು ಅಸಾದುಲ್ಲಾಖಾನ್ ಅಭಿಪ್ರಾಯ

ಉಪನ್ಯಾಸಕರಿಗೆ ನಿರಂತರ ಕಲಿಕೆ ಅಗತ್ಯ

Published:
Updated:

ಕೋಲಾರ: ‘ಉಪನ್ಯಾಸಕರು ಅಧ್ಯಯನಶೀಲರಾಗಬೇಕು. ಆಗ ಮಾತ್ರ ವೃತ್ತಿಯಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಸಾದುಲ್ಲಾಖಾನ್ ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಿಗೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳಂತೆಯೇ ಉಪನ್ಯಾಸಕರಿಗೂ ನಿರಂತರ ಕಲಿಕೆ ಅತ್ಯಗತ್ಯ’ ಎಂದರು.

‘ಆಧುನಿಕತೆ, ತಾಂತ್ರಿಕತೆ ಹಾಗೂ ಬದಲಾದ ಶಿಕ್ಷಣ ನೀತಿಗೆ ಅನುಗುಣವಾಗಿ ಉಪನ್ಯಾಸಕರ ಜ್ಞಾನ ವಿಸ್ತಾರವಾಗಬೇಕು. ಉಪನ್ಯಾಸಕರು ಅಧ್ಯಯನಶೀಲರಾಗದಿದ್ದರೆ ಬೋಧನೆ ಗುಣಮಟ್ಟ ಕುಸಿಯುತ್ತದೆ. ವೃತ್ತಿ ಬದುಕಿಗೆ ಸಂಬಂಧಿಸಿದ ತರಬೇತಿ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಬೋಧನಾ ಕ್ರಮ ಉತ್ತಮಪಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮದಡಿ ಮಕ್ಕಳಿಗೆ ಬೋಧನೆ ಮಾಡಬೇಕು. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಕಲಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ತರಬೇತಿ ಕಾರ್ಯಾಗಾರಗಳು ಉಪಯುಕ್ತ’ ಎಂದು ತಿಳಿಸಿದರು.

ಮಾನ್ಯತೆ ವಿಸ್ತರಣೆ: ‘ನಿರಂತರ ಅಧ್ಯಯನಶೀಲತೆಯಿಂದ ಮಾತ್ರ ಉತ್ತಮ ಉಪನ್ಯಾಸಕರಾಗಬಹುದು. ಮಕ್ಕಳ ಸಮಸ್ಯೆ ಪರಿಹರಿಸುವ ಶಕ್ತಿ ಪಡೆದುಕೊಂಡಾಗ ಗುರುವೆಂಬ ಭಾವನೆ ಬಲಗೊಳ್ಳುತ್ತದೆ. ವಿಜ್ಞಾನ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಮಾನ್ಯತೆ ಈಗ ವಾಣಿಜ್ಯ ಮತ್ತು ಕಲಾ ವಿಭಾಗಕ್ಕೂ ವಿಸ್ತರಣೆಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯ ಅಧ್ಯಯನಕ್ಕೆ ಪೂರಕವಾಗಿರುವ ಅರ್ಥಶಾಸ್ತ್ರವು ಹೆಚ್ಚು ಮಹತ್ವ ಪಡೆದುಕೊಂಡಿದೆ’ ಎಂದು ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ವೆಂಕಟಸ್ವಾಮಿ ಹೇಳಿದರು.

‘ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ದಾಖಲಾಗಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಕಾಲವಿತ್ತು. ಆದರೆ, ಈಗ ಅರ್ಥಶಾಸ್ತ್ರಕ್ಕೆ ಹೆಚ್ಚು ಮಹತ್ವ ಬಂದಿದೆ. ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕಿಂತಲೂ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ದಾಖಲಾಗುತ್ತಿದ್ದಾರೆ’ ಎಂದು ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಅಧ್ಯಕ್ಷ ಟಿ.ಚಂದ್ರಪ್ಪ ತಿಳಿಸಿದರು.

ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಸಂಯೋಜಕ ಆರ್.ಸಿ.ಶ್ರೀನಿವಾಸರೆಡ್ಡಿ, ಸಹ ಸಂಯೋಜಕ ಕೆ.ಸಿ.ಚಂದ್ರಶೇಖರಾಚಾರಿ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !