ಭಾರತಕ್ಕೆ ನಮ್ಮ ಬೌಲರ್‌ಗಳು ಸವಾಲಾಗಲಿದ್ದಾರೆ: ಮೈಕ್‌ ಹಸ್ಸಿ

7

ಭಾರತಕ್ಕೆ ನಮ್ಮ ಬೌಲರ್‌ಗಳು ಸವಾಲಾಗಲಿದ್ದಾರೆ: ಮೈಕ್‌ ಹಸ್ಸಿ

Published:
Updated:

ಬೆಂಗಳೂರು: ‘ಈ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ನಮ್ಮ ತಂಡದ ಬೌಲರ್‌ಗಳು ಸವಾಲಾಗಲಿದ್ದಾರೆ’ ಎಂದು ಆಸ್ಟ್ರೇಲಿಯಾ ತಂಡದ ಹಿರಿಯ ಕ್ರಿಕೆಟಿಗ ಮೈಕ್‌ ಹಸ್ಸಿ ಹೇಳಿದರು. 

ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ ಆಯೋಜಿಸಿದ್ದ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌)ನ ಪ್ರಚಾರ ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

‘ನಮ್ಮ ತಂಡದಲ್ಲಿ ಸ್ಟೀವ್‌ ಸ್ಮಿತ್‌ ಹಾಗೂ ಡೆವಿಡ್‌ ವಾರ್ನರ್‌ ಅವರಿಲ್ಲದೇ ಇರುವುದು ಹಿನ್ನಡೆಯಾಗಲಿದೆ ಎಂಬುದು ಸತ್ಯ. ಆದರೆ, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಜಲ್‌ವುಡ್‌, ಪ್ಯಾಟ್‌ ಕಮಿನ್ಸ್‌ ಅವರಂತಹ ಬೌಲರ್‌ಗಳು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಮೈಕ್‌ ಹಸ್ಸಿ ಅಭಿಪ್ರಾಯಪಟ್ಟರು. 

‘ಇಬ್ಬರು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿರುವುದರಿಂದ ರನ್‌ಗಳನ್ನು ಕಲೆಹಾಕುವುದು ಕಷ್ಟವಾಗಬಹುದು. ಆದರೆ, ಈ ಸರಣಿಯು ಯುವ ಆಟಗಾರರು ಬೆಳಕಿಗೆ ಬರಲು ಉತ್ತಮ ವೇದಿಕೆಯಾಗಲಿದೆ. ಜೊತೆಗೆ, ಈ ಬಾರಿ ನಮ್ಮ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಅವಕಾಶ ಭಾರತಕ್ಕೆ ಇದೆ’ ಎಂದು ಅವರು ತಿಳಿಸಿದರು. 

ಈ ವರ್ಷದ ಆರಂಭದಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದ ಡೆವಿಡ್‌ ವಾರ್ನರ್‌ ಹಾಗೂ ಸ್ಟೀವ್‌ ಸ್ಮಿತ್‌ ಅವರು ಒಂದು ವರ್ಷದ ಅವಧಿಗೆ ನಿಷೇಧ ಶಿಕ್ಷೆಗೊಳಗಾಗಿದ್ದಾರೆ. 

ಇದೇ ವರ್ಷದ ನವೆಂಬರ್‌ ತಿಂಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ. ಉಭಯ ತಂಡಗಳು ಮೂರು ಟ್ವೆಂಟಿ–20, ನಾಲ್ಕು ಟೆಸ್ಟ್‌ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿವೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !