ಸಾಗರದ ತೆರೆಯಲಿ; ಮನಸಿನ ಮರೆಯಲಿ

7

ಸಾಗರದ ತೆರೆಯಲಿ; ಮನಸಿನ ಮರೆಯಲಿ

Published:
Updated:

‘ಹಿಂದೆ ಬೇರೆ ಬೇರೆ ಬಗೆಯ ಸಿನಿಮಾಗಳನ್ನು ಮಾಡಿದ್ದೆ. ಆದರೆ ಅವೆಲ್ಲವಕ್ಕಿಂತ ಭಿನ್ನವಾಗಿರುವ ಸಿನಿಮಾ ಇದು. ನನ್ನ ಮಟ್ಟಿಗೆ ಇದು ಮೊದಲ ರೊಮ್ಯಾಂಟಿಕ್‌ ಲವ್‌ ಸ್ಟೋರಿ’ ಹೀಗೆನ್ನುವಾಗ ನಿರ್ದೇಶಕ ಆಸ್ಕರ್ ಕೃಷ್ಣ ಅವರ ಮಾತಿನಲ್ಲಿಯೂ ಪುಲಕ ಎದ್ದು ಕಾಣುತ್ತಿತ್ತು. ಹಳೆಯ ಪ್ರಯತ್ನಗಳಲ್ಲಿ ಕಂಡ ಸೋಲನ್ನು ಮರೆತು ಮೇಲೆದ್ದು ಬರುವ ವಿಶ್ವಾಸವೂ ಅವರ ಮಾತಿನಲ್ಲಿತ್ತು. 

‘ಮನಸಿನ ಮರೆಯಲಿ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ. ಮ. ಹರೀಶ್ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಲಿಂಗರಾಜು ಮತ್ತು ಶಬೀನಾ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

‘ಇದು ಕಾವ್ಯಾತ್ಮಕ ಪ್ರೇಮಕಥೆ. ಇಂಥದ್ದೊಂದು ಸಿನಿಮಾ ಮಾಡಬೇಕು ಎಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಈಗ ಸರಿಯಾದ ನಿರ್ಮಾಪಕರು ಸಿಕ್ಕರು. ಈ ಚಿತ್ರದ ಕಥೆಗೆ ಸರಿಯಾಗಿ ಹೊಂದುವ ಹುಡುಗ ಕಿಶೋರ್ ಕೂಡ ಸಿಕ್ಕ’ ಎಂದು ವಿವರಿಸಿದರು ನಿರ್ದೇಶಕರು. ಸಮುದ್ರ ತೀರ, ಮರಳು ಮತ್ತು ಪ್ರೇಮಿಗಳು ಈ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತವಂತೆ. ಜೀವಂತ ಪಾತ್ರಗಳಂತೆ ಸ್ಥಳಗಳೂ ‘ಮನಸಿನ ಮರೆಯಲಿ’ ಪ್ರಖರತೆಯನ್ನು ಹೆಚ್ಚಿಸುತ್ತವೆ ಎಂಬ ಸೂಚನೆ ಅವರ ಮಾತಿನಲ್ಲಿತ್ತು. 

ಮುಂದಿನ ವಾರ ಸೆನ್ಸಾರ್‌ ಆಗಲಿದೆಯಂತೆ. ಆಗಸ್ಟ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ತಂಡಕ್ಕಿದೆ. ‘ಎಲ್ಲರ ಬದುಕಿನಲ್ಲಿಯೂ ಇದ್ದೇ ಇರುವ ಸಾಮಾನ್ಯ ಕಥೆಯನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎಂದರು ನಿರ್ಮಾಪಕ ಲಿಂಗರಾಜು. 

ಸಂಗೀತ ನಿರ್ದೇಶಕ ತ್ಯಾಗರಾಜ್ ಮಾತನಾಡಿ, ‘ಹಾಡುಗಳ ಮೂಲಕವೇ ಒಂದು ಸಿನಿಮಾ ಕಥೆಯ ಮುಖ್ಯ ಸಂಗತಿಗಳನ್ನು ಹೇಗೆ ನಿರೂಪಿಸಬಹುದು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಎಲ್ಲ ಹಾಡುಗಳು ವಿಭಿನ್ನವಾಗಿ ಮೂಡಿ ಬಂದಿದೆ’ ಎಂದರು. 

‘ನನ್ನ ಸ್ನೇಹಿತರಿಗೆಲ್ಲ ಈ ಚಿತ್ರದ ಹಾಡುಗಳನ್ನು ಕೇಳಿ ತುಂಬ ಇಷ್ಟಪಟ್ಟಿದ್ದಾರೆ. ಅದರಿಂದಲೇ ಸಿನಿಮಾ ನೋಡಲೇಬೇಕು ಎಂಬ ಕಾತರವನ್ನೂ ಬೆಳೆಸಿಕೊಂಡಿದ್ದಾರೆ’ ಎಂದರು ನಾಯಕಿ ದಿವ್ಯಾ ಗೌಡ. ‘ಒಂದು ಒಳ್ಳೆಯ ಲವ್‍ಸ್ಟೋರಿ ಆಗಬೇಕೆಂದರೆ ಛಾಯಾಗ್ರಹಣ, ಸಂಗೀತ ಚೆನ್ನಾಗಿರಬೇಕು. ಅದರಲ್ಲಿ ನಮ್ಮ ಚಿತ್ರ ಗೆದ್ದಿದೆ. ನಾನು ಈ ಸಿನಿಮಾದಲ್ಲಿ ಒಬ್ಬ ಲೋಕಲ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಕಿಶೋರ್. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !