ಯಕ್ಷಗಾನ ಅಷ್ಟಾಹ: ಪ್ರೇಕ್ಷಕರಿಗೆ ತುಂಬು ರಂಜನೆ

7

ಯಕ್ಷಗಾನ ಅಷ್ಟಾಹ: ಪ್ರೇಕ್ಷಕರಿಗೆ ತುಂಬು ರಂಜನೆ

Published:
Updated:
Deccan Herald

ಉಡುಪಿ: ಯಕ್ಷಗಾನದಲ್ಲಿ ಸಮರ್ಥ ಹಿಮ್ಮೇಳ ಮತ್ತು ಪ್ರಬುದ್ಧರಾದ ಮುಮ್ಮೇಳ ಕಲಾವಿದರ ಸಮ್ಮಿಲನದೊಂದಿಗೆ ಪ್ರದರ್ಶನ ಪರಿಪೂರ್ಣ  ಎನಿಸುತ್ತದೆ.  ಪೌರಾಣಿಕ ಪ್ರಸಂಗಗಳಿಗೆ ಸಾರ್ವಕಾಲಿಕ ಮನ್ನಣೆ ದೊರೆತು ಜನಮನ್ನಣೆಗೆ ಪಾತ್ರವಾಗುತ್ತದೆ.  ಇತ್ತೀಚೆಗೆ ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ಮುಕ್ತಾಯವಾದ ಬಡಗುತಿಟ್ಟಿನ ಹಿರಿಯ ಭಾಗವತರಲ್ಲೊಬ್ಬರಾದ ಸುಬ್ರಹ್ಮಣ್ಯ ಧಾರೇಶ್ವರರ ಸಂಯೋಜನೆಯ ’ಯಕ್ಷ ಅಷ್ಟಾಹ’  ಉತ್ತಮವಾಗಿತ್ತು. ‌

ಪ್ರಥಮ ದಿನ ಬಡಗುತಿಟ್ಟಿನಲ್ಲಿ ಅಪರೂಪವಾಗಿ ನಡೆಯುವ ‘ಸೀತಾ ಕಲ್ಯಾಣ’ ಪ್ರಸಂಗ ಹಮ್ಮಿಕೊಳ್ಳಲಾಗಿತ್ತು. ಈ ಕಥೆ ತುಸು ನೀರಸ ಎನಿಸಿದರೂ  ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ವಿಶ್ವಾಮಿತ್ರ, ತೀರ್ಥಹಳ್ಳಿ ಗೋಪಾಲಾಚಾರ್ಯ ಅವರ ರಾಮ ಪಾತ್ರದೊಂದಿಗೆ ಸುಬ್ರಹ್ಮಣ್ಯ  ಧಾರೇಶ್ವರ ಹಾಗೂ ಚಂದ್ರ ಕಾಂತ್ ರಾವ್ ಮೂಡುಬೆಳ್ಳೆ ಅವರ ಭಾಗವತಿಕೆ, ಗಜಾನನ ಬೋಳ್ಗೆರೆ ಅವರ ಮದ್ದಳೆ, ಚಂಡೆಯ ಗಂಡುಗಲಿ ಕೋಟ ಶಿವಾನಂದ ಅವರ ಚಂಡೆ ಹೀಗೆ ಸಮರ್ಥ ಹಿಮ್ಮೇಳದೊಂದಿಗೆ ಪ್ರದರ್ಶನ ಉತ್ತಮ ಆರಂಭ ಕಂಡಿತು.

ಎರಡನೆಯ ದಿನ  ‘ಕವಿರತ್ನ ಕಾಳಿದಾಸ’  ಕಲಾಭಿಮಾನಿಗಳಿಂದ ವಿಶೇಷ ಪ್ರಶಂಸನೆಗೆ ಪಾತ್ರವಾಯಿತು. ಸುಮಾರು 25 ವರ್ಷಗಳ ಹಿಂದೆ ಧಾರೇಶ್ವರರ ಬಹುಬೇಡಿಕೆಯ ಆಡಿಯೋ ಕ್ಯಾಸೆಟ್ ಆಗಿದ್ದ ಈ ಪ್ರಸಂಗದ ಪದ್ಯಗಳು ಅದೇ ರಿತಿಯಲ್ಲಿ ಮೂಡಿ ಬಂದವು. ಕುಮುದಪ್ರಿಯ, ಕಾಳ, ಕಲಾಧರ, ವಿದ್ಯಾಧರೆ ಪಾತ್ರವನ್ನು ಹಿರಿಯ ಕಲಾವಿದರು ಸಮರ್ಥವಾಗಿ ನಿಭಾಯಿಸಿದರು.

ಮೂರನೆಯ ದಿನ ಮೂಡಿಬಂದ ‘ಶಿಖಂಡಿ ವಿವಾಹ’  ಇತ್ತೀಚಿನ ವರ್ಷಗಳಲ್ಲಿ ಈ ಪ್ರಸಂಗ ಪ್ರದರ್ಶನ ಕಂಡದ್ದೇ ವಿರಳ. ಶಿಖಂಡಿಯಾಗಿ ಅಶೋಕ್ ಭಟ್ ಎಲ್ಲರು ಮೆಚ್ಚುವಂತೆ ಪಾತ್ರ ನಿರ್ವಹಿಸಿದರು.  ಮುಂದೆ ಧಾರೇಶ್ವರ ಹಾಗೂ ಮೂಡುಬೆಳ್ಳೆಯವರ ಹಳೆಯ ಶೈಲಿಯ ಸಾಂಪ್ರದಾಯಿಕವಾದ ಭಾಗವತಿಕೆಯಲ್ಲಿ ‘ಭೀಷ್ಮ ಪ್ರತಿಜ್ಞೆ’ ಪ್ರಸಂಗದಲ್ಲಿ ಕಂದರ ಅಂಬಿಗನಾಗಿ ಶ್ರೀಧರ್ ಭಟ್ ಕಾಸರಕೋಡು, ಯೋಜನಗಂಧಿಯಾಗಿ ವಂಡಾರು ಗೋವಿಂದ, ಶಂತನು ಆಗಿ ಕೊಂಡದಕುಳಿ ಮತ್ತು ದೇವವೃತನಾಗಿ ತೀರ್ಥಹಳ್ಳಿಯವರು ಎಲ್ಲರೂ ತಲೆದೂಗುವಂತೆ ಅಭಿನಯಿಸಿದರು. 

ಕೊಂಡದಕುಳಿಯವರ ಭೀಷ್ಮ, ತೀರ್ಥಹಳ್ಳಿಯವರ ಅರ್ಜುನ ಅಂತೂ ‍ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿತು. 

ಆರನೆಯ ದಿನ ಹಾಸ್ಯ ಹಾಗೂ ಸ್ತ್ರೀ ವೇಷಗಳಿಂದ ಹೊರತಾಗಿ ನಡೆದ ‘ವೀರಮಣಿ ಕಾಳಗ’ ಪ್ರಸಂಗದಲ್ಲಿ ಉಪ್ಪುಂದ ನಾಗೇಂದ್ರ ರಾವ್ ಇವರ ವೀರಮಣಿ, ತೀರ್ಥಹಳ್ಳಿಯವರ ರುಕ್ಮಾಂಗ, ಕೊಂಡದಕುಳಿಯವರ ಹನುಮಂತ ಪಾತ್ರಗಳು ಕಲಾಭಿಮಾನಿಗಳನ್ನು ರಂಜಿಸಿತು.

ಕಲಾಭಿಮಾನಿಗಳನ ಮನಸೂರೆಗೊಂಡ ಮತ್ತೊಂದು ಪ್ರಸಂಗ ‘ಬಬ್ರುವಾಹನ ಕಾಳಗ’. 7ನೇ ದಿನ ನಡೆದ ಈ ಪ್ರದರ್ಶನದಲ್ಲಿ ತೀರ್ಥಹಳ್ಳಿಯವರ ಬಬ್ರುವಾಹನ ಕೊಂಡದಕುಳಿಯವರ ಅರ್ಜುನ ವಂಡಾರು ಗೋವಿಂದವರವ ಚಿತ್ರಾಮಗದೆ ಉತ್ತಮವಾಗಿತ್ತು. ಅದರಲ್ಲಿ ಬಬ್ರುವಾಹನ ಚಿತ್ರಾಂಗದೆಯವರ ಕೊನೆಯ ಸನ್ನಿವೇಶವಂತೂ ಅದ್ಭುತ. ಧನ್ವಂತರಿ ಮಹಿಮೆ ಪ್ರಸಂಗದಲ್ಲಿ ದೇವೆಂದ್ರನಾಗಿ ನರಸಿಂಹ ಗಾಂವ್ಕರ್, ಕದಂಬನಾಗಿ ತೀರ್ಥಹಳ್ಳಿ, ಕುಮಾರಿಯಾಗಿ ವಂಡಾರು ಗೋವಿಂದ, ಅಲ್ಲದೇ ಹಿರಿಯ ಕಲಾವಿದರಾದ ಆರ್‍ಗೋಡು ಮೋಹನ್‌ದಾಸ್ ಶೆಣೈ ಭಾಗವಹಿಸಿದ್ದರು. 

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರ ಶುಭಾಶಿರ್ವಾದದೊಂದಿಗೆ, ಪರ್ಯಾಯ ಫಲಿಮಾರು ಮಠ, ಶ್ರೀ ಕೃಷ್ಣ ಮಠ , ತಲ್ಲೂರು ಫ್ಯಾಮಿಲಿ ಟ್ರಸ್ಟ್,  ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ  ಸಹಯೋಗದೊಂದಿಗೆ ಧಾರೇಶ್ವರ ಯಕ್ಷ ಚಾರಿಟೇಬಲ್ ಟ್ರಸ್ಟ್ ಕಿರಿಮಂಜೇಶ್ವರ ಪ್ರದರ್ಶನಕ್ಕೆ ಕೈ ಜೋಡಿಸಿವೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !