ದುರ್ಬಲ ಮಕ್ಕಳಿಗಿಲ್ಲಿ ಪೌಷ್ಟಿಕತೆಯ ‘ಬಲ’ ನೀಡುತ್ತಿದೆ ಪುನರ್ವಸತಿ ಕೇಂದ್ರ

7
ಜಿಲ್ಲಾ ಆಸ್ಪತ್ರೆಯ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರ

ದುರ್ಬಲ ಮಕ್ಕಳಿಗಿಲ್ಲಿ ಪೌಷ್ಟಿಕತೆಯ ‘ಬಲ’ ನೀಡುತ್ತಿದೆ ಪುನರ್ವಸತಿ ಕೇಂದ್ರ

Published:
Updated:
Deccan Herald

ದಾವಣಗೆರೆ: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪಾಲಿಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರ (ಎನ್‌.ಆರ್‌.ಸಿ) ವರದಾನವಾಗಿದೆ. ಪೋಷಕಾಂಶಗಳ ಕೊರತೆ, ಅನಾರೋಗ್ಯ ಕಾರಣಕ್ಕೆ ದುರ್ಬಲರಾಗಿರುವ ಮಕ್ಕಳಿಗೆ ಈ ಕೇಂದ್ರವು ‘ಬಲ’ ನೀಡುತ್ತಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಕಾರ್ಯನಿರ್ವಹಿಸುವ ಎನ್‌.ಆರ್‌.ಸಿಯಲ್ಲಿ ತೀವ್ರ ಅಪೌಷ್ಟಿಕ ಮಕ್ಕಳನ್ನು ದಾಖಲಿಸಿಕೊಂಡು ಔಷಧೋಪಚಾರ ಹಾಗೂ ಪೋಷಕಾಂಶಯುಕ್ತ ಆಹಾರವನ್ನು ನೀಡುವ ಮೂಲಕ ಅವರಲ್ಲಿ ಹೊಸ ಚೈತನ್ಯ ತುಂಬಲಾಗುತ್ತಿದೆ.

2017–18ನೇ ಸಾಲಿನಲ್ಲಿ ಈ ಕೇಂದ್ರದಲ್ಲಿ ಜಿಲ್ಲೆಯ 124 ಮಕ್ಕಳಿಗೆ ಚಿಕಿತ್ಸೆ ಕೊಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜುಲೈ ಅಂತ್ಯದವರೆಗೆ 46 ಮಕ್ಕಳಿಗೆ ಔಷಧೋಪಚಾರ ಮಾಡಿ, ಸದೃಢರನ್ನಾಗಿಸುವತ್ತ ಹೆಜ್ಜೆ ಇಡಲಾಗಿದೆ.

400 ತೀವ್ರ ಅಪೌಷ್ಟಿಕ ಮಕ್ಕಳು:
‘ಜಿಲ್ಲೆಯಲ್ಲಿ 400 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರಿಗೆ ಔಷಧೋಪಚಾರ ಮಾಡಲಾಗುತ್ತಿದೆ. ಅಂಗನವಾಡಿಗಳಲ್ಲಿ ಪ್ರತಿ ತಿಂಗಳು ಮಕ್ಕಳ ತೂಕ ಪರಿಶೀಲಿಸಿದಾಗ ಮಾರ್ಗಸೂಚಿ ಪ್ರಕಾರ ಹೆಚ್ಚು ಅಪೌಷ್ಟಿಕತೆ ಇರುವ ಮಕ್ಕಳು ಕಂಡು ಬಂದರೆ ಅವರನ್ನು ಮಕ್ಕಳ ತಜ್ಞರ ಬಳಿಗೆ ಒಯ್ದು ತಪಾಸಣೆ ಮಾಡಿಸಲಾಗುತ್ತದೆ. ವೈದ್ಯರು ಶಿಫಾರಸು ಮಾಡಿದರೆ ಅಂಥ ಮಕ್ಕಳನ್ನು ಎನ್‌.ಆರ್‌.ಸಿಗೆ ಕಳುಹಿಸಿಕೊಡುತ್ತೇವೆ. ಅಲ್ಲಿ ಮಕ್ಕಳಿಗೆ 15 ದಿನಗಳ ಕಾಲ ವಿಶೇಷ ಪೋಷಕಾಂಶಯುಕ್ತ ಆಹಾರ ಹಾಗೂ ಔಷಧೋಪಚಾರ ಮಾಡಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

‘ಅಪೌಷ್ಟಿಕತೆ ಇರುವ ಒಂದು ಮಗುವಿಗೆ ವರ್ಷಕ್ಕೆ ₹ 2,000 ವೆಚ್ಚ ಮಾಡುತ್ತೇವೆ. ಅಂಗನವಾಡಿಯಲ್ಲಿ ನಿತ್ಯ ಬೇಯಿಸಿದ ಮೊಟ್ಟೆ ಹಾಗೂ ಹಾಲು ಕೊಡುತ್ತೇವೆ. ತೂಕ ವೃದ್ಧಿಯಾಗುವಂತೆ ಅಂಗನವಾಡಿ ಕಾರ್ಯಕರ್ತೆಯರು ವಿಶೇಷ ನಿಗಾ ವಹಿಸುತ್ತಾರೆ. ತೀವ್ರ ರೋಗಬಾಧೆಯಿಂದ ಬಳಲುತ್ತಿರುವ ಅಪೌಷ್ಟಿಕ ಮಕ್ಕಳು ಜಿಲ್ಲೆಯಲ್ಲಿ ಇಲ್ಲ’ ಎಂದು ಹೇಳಿದರು.

ಎನ್‌.ಆರ್‌.ಸಿಯಲ್ಲಿ 10 ಮಕ್ಕಳಿಗೆ ಅವಕಾಶ:
ಅಪೌಷ್ಟಿಕ ಪುನರ್ವಸತಿ ಕೇಂದ್ರದಲ್ಲಿ ಒಮ್ಮೆ 10 ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಅವಕಾಶವಿದೆ. ಐದು ವರ್ಷದೊಳಗಿನ ತೀವ್ರ ಅಪೌಷ್ಟಿಕ ಮಕ್ಕಳಿಗೆ 15 ದಿನಗಳ ಕಾಲ ಇಲ್ಲಿಯೇ ಉಳಿಸಿಕೊಂಡು ಔಷಧೋಪಚಾರ ನೀಡಲಾಗುತ್ತದೆ. ತಾಯಿಗೆ ಪೋಷಕಾಂಶಯುಕ್ತ ಆಹಾರವನ್ನು ಹೇಗೆ ತಯಾರಿಸಬೇಕು ಎಂಬುದನ್ನೂ ಹೇಳಿಕೊಡಲಾಗುತ್ತದೆ. ಮಗುವಿನ ಜೊತೆ ತಾಯಿ ಇಲ್ಲಿಯೇ ಉಳಿದುಕೊಳ್ಳಬೇಕಾಗಿದ್ದರಿಂದ ದಿನಕ್ಕೆ ₹ 175 ದಿನಭತ್ಯೆಯನ್ನೂ ಕೊಡಲಾಗುತ್ತದೆ. ಹೀಗಿದ್ದರೂ ಕೆಲವು ತಾಯಂದಿರು ಎಂಟು– ಹತ್ತು ದಿನಗಳಿಗೇ ಮನೆಗೆ ಮರಳುತ್ತಾರೆ ಎಂದು ಕೇಂದ್ರದ ವೈದ್ಯರು ಮಾಹಿತಿ ನೀಡಿದರು.

ಒಟ್ಟು ಹೆರಿಗೆ ಪ್ರಮಾಣದಲ್ಲಿ ಶೇ 30ರಷ್ಟು ಕಡಿಮೆ ತೂಕದ ಮಕ್ಕಳು ಹುಟ್ಟುತ್ತಿದ್ದಾರೆ. 2.5 ಕೆ.ಜಿ ತೂಕದ ಮಗು ಹಾಗೂ 37 ವಾರ ಪೂರ್ಣಗೊಳಿಸಿದ ಬಳಿಕ ಜನಿಸುವ ಮಗು ಸಾಮಾನ್ಯವಾಗಿ ಆರೋಗ್ಯವಾಗಿರುತ್ತದೆ. 700 ಗ್ರಾಂ ತೂಕದ ಮಗುವೂ ಜನಿಸುತ್ತಿದ್ದು, ಎನ್‌.ಐ.ಸಿ.ಯುನಲ್ಲಿ ವಿಶೇಷ ಚಿಕಿತ್ಸೆ ಕೊಡಲಾಗುತ್ತದೆ ಎಂದು ವೈದ್ಯರು ತಿಳಿಸಿದರು.

ಚಿಕಿತ್ಸೆ ನೀಡಿದ ಬಳಿಕ ಒಂದು ಕೆ.ಜಿ.ಗೆ ಪ್ರತಿ ದಿನ 5 ಗ್ರಾಂನಿಂದ 8 ಗ್ರಾಂ ತೂಕ ಹೆಚ್ಚಾಗುತ್ತದೆ. ಪ್ರತಿ ತಿಂಗಳು ಮಗುವನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಚಿಕಿತ್ಸೆ ಕೊಟ್ಟ ಬಳಿಕ ಶೇ 80ರಷ್ಟು ಮಕ್ಕಳು ಸಹಜ ಸ್ಥಿತಿಗೆ ಬರುತ್ತಾರೆ. ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದು ವೈದ್ಯರ ಅಭಿಪ್ರಾಯ.

****
ಅಂಕಿ– ಅಂಶಗಳು 
400 ಜಿಲ್ಲೆಯಲ್ಲಿರುವ ಒಟ್ಟು ತೀವ್ರ ಅಪೌಷ್ಟಿಕ ಮಕ್ಕಳು

104 ಪರಿಶಿಷ್ಟ ಜಾತಿಯ ಮಕ್ಕಳು

56 ಪರಿಶಿಷ್ಟ ಪಂಗಡದ ಮಕ್ಕಳು

240 ಇತರೆ ವರ್ಗದ ಮಕ್ಕಳು

₹ 2,000 ಒಂದು ಮಗುವಿಗೆ ವರ್ಷಕ್ಕೆ ಮಾಡುವ ವೆಚ್ಚ

ತೀವ್ರ ಅಪೌಷ್ಟಿಕ ಮಕ್ಕಳ ವಿವರ

ದಾವಣಗೆರೆ 105

ಚನ್ನಗಿರಿ 107

ಜಗಳೂರು 51

ಹರಿಹರ 44

ಹರಪನಹಳ್ಳಿ 37

ಹೊನ್ನಾಳಿ 56

ಒಟ್ಟು  400

**

ಎನ್‌ಆರ್‌ಸಿಯಲ್ಲಿ ಚಿಕಿತ್ಸೆ ಪಡೆದ ಮಕ್ಕಳ ವಿವರ

(2017–18ನೇ ಸಾಲಿಗೆ)

124 ಚಿಕಿತ್ಸೆ ಪಡೆದ ಒಟ್ಟು ಮಕ್ಕಳು

60 ಚಿಕಿತ್ಸೆ ಪಡೆದ ಗಂಡುಮಕ್ಕಳು

64 ಚಿಕಿತ್ಸೆ ಪಡೆದ ಹೆಣ್ಣುಮಕ್ಕಳು

2018–19ನೇ ಸಾಲಿಗೆ

46 ಚಿಕಿತ್ಸೆ ಪಡೆದ ಒಟ್ಟು ಮಕ್ಕಳು

22 ಚಿಕಿತ್ಸೆ ಪಡೆದ ಗಂಡುಮಕ್ಕಳು

24 ಚಿಕಿತ್ಸೆ ಪಡೆದ ಹೆಣ್ಣುಮಕ್ಕಳು

**

ಅಪೌಷ್ಟಿಕತೆಗೆ ಕಾರಣಗಳು
* ಗರ್ಭಕೋಶ ಬೆಳವಣಿಗೆ ಹೊಂದುವ ಪೂರ್ವದಲ್ಲೇ ಗರ್ಭ ಧರಿಸುವುದು

* ಮಗುವಿನ ಬೆಳಗಣಿಗೆಯಾಗುವ ಮುನ್ನ ಅವಧಿಪೂರ್ವ ಹೆರಿಗೆ

* ತಂದೆ– ತಾಯಿಯಿಂದ ಅನುವಂಶಿಕವಾಗಿ ಬರುವುದು

* ಎರಡು ಮಕ್ಕಳ ನಡುವಿನ ಅವಧಿ ಕಡಿಮೆಯಾಗುವುದು

* ಹದಿಹರೆಯದಲ್ಲೇ ತಾಯಿಯಾದಾಗ ಎದೆ ಹಾಲು ಉತ್ಪಾದನೆಯಾಗದೇ ಮಗುವಿಗೆ ಪೋಷಕಾಂಶ ಲಭಿಸದೇ ಇರುವುದು

* ಪೋಷಕಾಂಶಯುಕ್ತ ಆಹಾರವನ್ನು ಮಗುವಿಗೆ ನೀಡದೇ ಇರುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !