ಮಾಲೂರು ವಿದ್ಯಾರ್ಥಿನಿ ಅತ್ಯಾಚಾರ–ಕೊಲೆಯಿಂದ ಭುಗಿಲೆದ್ದ ಆಕ್ರೋಶ

7

ಮಾಲೂರು ವಿದ್ಯಾರ್ಥಿನಿ ಅತ್ಯಾಚಾರ–ಕೊಲೆಯಿಂದ ಭುಗಿಲೆದ್ದ ಆಕ್ರೋಶ

Published:
Updated:
Deccan Herald

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಬೀದಿಗಿಳಿದು ಬೃಹತ್‌ ಹೋರಾಟ ನಡೆಸಿದರು.

ಮಾಲೂರು ಪಟ್ಟಣದಲ್ಲಿ ಬೆಳಿಗ್ಗೆ ಅಂಗಡಿಗಳನ್ನು ಮುಚ್ಚಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌, ಆಟೊಗಳು ಕೆಲ ಹೊತ್ತು ರಸ್ತೆಗಿಳಿಯಲಿಲ್ಲ. ವಾಹನ ಸಂಚಾರ ವಿರಳವಾಗಿತ್ತು. ಪಟ್ಟಣದಲ್ಲಿ ಅಘೋಷಿತ ಬಂದ್‌ ವಾತಾವರಣವಿತ್ತು.

ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾಲೂರು ತಾಲ್ಲೂಕು ಕ್ರೀಡಾಂಗಣದ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮಾರಿಕಾಂಭ ವೃತ್ತದವರೆಗೆ ಮೆರವಣಿಗೆ ಬಂದು ಸುಮಾರು ಎರಡು ತಾಸು ರಸ್ತೆ ತಡೆ ಮಾಡಿದರು.

‘ವಿದ್ಯಾರ್ಥಿನಿ ಕೊಲೆ ಪ್ರಕರಣ ಸಂಬಂಧ ಉನ್ನತ ತನಿಖೆ ನಡೆಸಬೇಕು. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು’ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಸುಡು ಬಿಸಿಲು ಲೆಕ್ಕಿಸದೆ ಗಂಟೆಗಟ್ಟಲೇ ರಸ್ತೆ ಮಧ್ಯೆ ಕುಳಿತು ಪೊಲೀಸರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಚೇರಿಗೆ ಮುತ್ತಿಗೆ: ರಸ್ತೆ ತಡೆಯಿಂದಾಗಿ ಬೆಂಗಳೂರು, ಕೋಲಾರ ಹಾಗೂ ಹೊಸೂರು ಮಾರ್ಗದ ರಸ್ತೆಯಲ್ಲಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಪ್ರತಿಭಟನಾಕಾರರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಯಿತು. ಪ್ರತಿಭಟನಾಕಾರರ ಮತ್ತೊಂದು ಗುಂಪು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿತು. ಬಳಿಕ ತಹಶೀಲ್ದಾರ್‌ ಗಿರೀಶ್‌ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕೇಂದ್ರ, ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಬಂಗಾರಪೇಟೆಯಲ್ಲೂ ರೈತ ಸಂಘ ಮತ್ತು ಹಸಿರು ಸೇನೆ, ಜನಾಧಿಕಾರ ಸಂಘಟನೆ, ಭಾರತ ವಿದ್ಯಾರ್ಥಿ ಒಕ್ಕೂಟ, ಕುಂಬಾರರ ಕ್ಷೇಮಾಭಿವೃದ್ಧಿ ಸಂಘ, ದಲಿತ ರೈತ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜನವಾದಿ ಮಹಿಳಾ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರು.

ಕೇಂದ್ರ ವಲಯ ಐಜಿಪಿ ಬಿ.ದಯಾನಂದ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ, ‘ಪ್ರಕರಣವು ತನಿಖೆ ಹಂತದಲ್ಲಿದೆ. ಹೀಗಾಗಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದಿಲ್ಲ. ಸದ್ಯದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !