ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಪ್ರಮಾಣಪತ್ರ ಸಲ್ಲಿಸಿ: ಬಿಇಒಗೆ ಸಿಇಒ ತರಾಟೆ

7

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಪ್ರಮಾಣಪತ್ರ ಸಲ್ಲಿಸಿ: ಬಿಇಒಗೆ ಸಿಇಒ ತರಾಟೆ

Published:
Updated:
Deccan Herald

ಕೋಲಾರ: ‘ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ನೀಡಿರುವ ಮಾಹಿತಿಯು ಸಮರ್ಪಕವಾಗಿರುವುದಾಗಿ ಛಾಪಾ ಕಾಗದದಲ್ಲಿ ನಮೂದಿಸಿ ಪ್ರಮಾಣಪತ್ರ ಸಲ್ಲಿಸಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿ ಗುರುವಾರ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಕುರಿತು ಬಿಇಒಗಳು ನೀಡಿರುವ ವರದಿ ಸರಿಯಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನೇಕ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲಾಗದೆ ಹಾಳಾಗುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇತ್ತೀಚೆಗೆ ನಡೆದ ಮುಖ್ಯಮಂತ್ರಿಯವರ ಸಭೆಯಲ್ಲಿ ಶಿಕ್ಷಣ ಇಲಾಖೆ ಬಗ್ಗೆ ಹೆಚ್ಚಿನ ಚರ್ಚೆಯಾಗಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಇಡೀ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 106 ಎಂದು ವರದಿ ನೀಡಿದ್ದೀರಿ. ಈ ವರದಿ ಗಮನಿಸಿದರೆ ನೀವು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂಬುದು ಗೊತ್ತಾಗುತ್ತದೆ’ ಎಂದು ಕಿಡಿಕಾರಿದರು.

‘ನೀವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಒಪ್ಪಿಕೊಳ್ಳಿ. ಇಲ್ಲವೇ, ನಾನು ಸಂಗ್ರಹಿಸಿರುವ ಮಾಹಿತಿ ಸರಿ ಎಂದು ಒಪ್ಪಿಕೊಳ್ಳಿ. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ತುಂಬಾ ಕಡಿಮೆಯಿದೆ ಎಂದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಮಕ್ಕಳನ್ನು ಹೇಗೆ ಗುರುತಿಸುತ್ತೀರಿ?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆ ಉಪ ನಿರ್ದೇಶಕ (ಪ್ರಭಾರ) ಜಯರಾಜ್‌, ‘ವಿದ್ಯಾರ್ಥಿ ಸತತ 6 ದಿನ ಶಾಲೆಗೆ ಬಾರದಿದ್ದರೆ ಮುಖ್ಯ ಶಿಕ್ಷಕರು ಶಿಕ್ಷಣ ಸಂಯೋಜಕರಿಗೆ ಮಾಹಿತಿ ನೀಡುತ್ತಾರೆ. ಬಳಿಕ 20ರಿಂದ 30 ದಿನವಾದರೂ ಶಾಲೆಗೆ ಬಾರದಿದ್ದರೆ ಅಂತಹವರನ್ನು ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿ ಎಂದು ಪರಿಗಣಿಸುತ್ತೇವೆ’ ಎಂದು ತಿಳಿಸಿದರು.

‘ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ವರ್ಷ ಮನೆ ಮನೆಗೆ ತೆರಳಿ 6 ವರ್ಷದಿಂದ -14 ವರ್ಷದೊಳಗಿನ ಮಕ್ಕಳ ಸಮೀಕ್ಷೆ ನಡೆಸಿ ವರದಿ ನೀಡುತ್ತಾರೆ’ ಎಂದು ವಿವರಿಸಿದರು.

ಬಯೋಮೆಟ್ರಿಕ್‌ ಹಾಜರಾತಿ: ಆಗ ಸಿಇಒ. ‘ನೀವು ಹೇಳುವುದನ್ನು ಒಪ್ಪುತ್ತೇನೆ. ನಾನು ಯಾವುದೇ ಶಾಲೆಗೆ ಭೇಟಿ ನೀಡಿದರೂ ಅಲ್ಲಿ ಹಾಜರಾತಿ ಪುಸ್ತಕದಲ್ಲಿರುವ ಸಂಖ್ಯೆಗಿಂತ ಶೇ 30ರಷ್ಟು ವಿದ್ಯಾರ್ಥಿಗಳು ಕಡಿಮೆ ಇರುವುದು ಕಂಡುಬಂದಿದೆ. ಶಿಕ್ಷಕರನ್ನು ಕೇಳಿದರೆ ಜಾತ್ರೆ, ಹಬ್ಬದ ಕಾರಣ ಮಕ್ಕಳು ಶಾಲೆಗೆ ಬಂದಿಲ್ಲ ಎನ್ನುತ್ತಾರೆ’ ಎಂದರು.

‘ಮಕ್ಕಳ ಆಧಾರ್‌ ಸಂಖ್ಯೆ ಜೋಡಣೆ ಮಾಡಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿದರೆ ನಿಮ್ಮ ಬಂಡವಾಳ ಬಯಲಾಗುತ್ತದೆ. ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಎಲ್ಲ ಮಾಹಿತಿ ದಾಖಲಾಗುತ್ತದೆ. ಈ ವ್ಯವಸ್ಥೆ ಆರಂಭಕ್ಕೆ ಕ್ರಮ ಕೈಗೊಳ್ಳಿ. ಪಠ್ಯಪುಸ್ತಕ, ಸಮವಸ್ತಗಳು ಸಮರ್ಪಕ ವಿತರಣೆಯಾಗದ ಬಗ್ಗೆ ದೂರು ಬಂದಿವೆ. ಈ ಸಮಸ್ಯೆ ಸರಿ ಹೋಗಬೇಕು’ ಎಂದು ಸೂಚಿಸಿದರು.

ತೀವ್ರ ತರಾಟೆ: ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಲು ಮುಂದಾದಾಗ ಸಿಇಒ ಆಕ್ಷೇಪ ವ್ಯಕ್ತಪಡಿಸಿ, ‘ಈಗಾಗಲೇ ನಿಮ್ಮ ವಿರುದ್ಧ ಸಾಕಷ್ಟು ದೂರು ಬಂದಿವೆ. ವಿಚಾರಣೆ ನಡೆಸುತ್ತೇನೆ. ಯಾವುದೇ ಮಾಹಿತಿ ನೀಡುತ್ತಿಲ್ಲ. ನೀವು ಮಾಹಿತಿ ನೀಡಲು ಮತ್ತೊಬ್ಬರು ಸಹಾಯಕರು ಬೇಕೇ?’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

‘ಇಲಾಖೆ ಸಮೀಕ್ಷೆ ಪ್ರಕಾರ 376 ಮಂದಿ ಪ್ರೌಢ ಶಾಲಾ ವಿದ್ಯಾರ್ಥಿನಿಯರು ಶಾಲೆಯಿಂದ ಹೊರಗೆ ಉಳಿದಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸೌಮ್ಯ ಮಾಹಿತಿ ನೀಡಿದರು.

ಸಿಇಒ ಮಾತನಾಡಿ, ‘ವಿದ್ಯಾರ್ಥಿನಿಯರೇ ಅಷ್ಟು ಮಂದಿ ಇದ್ದರೆ ಇನ್ನು ಬಾಲಕರು ಎಷ್ಟಿರಬಹುದು? ಇನ್ನು ಚಿಕ್ಕ ವಯಸ್ಸಿನ ಮಕ್ಕಳ ಸಂಖ್ಯೆ ಎಷ್ಟಿರಬಹುದು? ಮಕ್ಕಳ ಭವಿಷ್ಯದ ಜತೆ ಆಟವಾಡಬೇಡಿ. ನಾನು ಸುಮ್ಮನಿರುವುದಿಲ್ಲ. ಕೂಡಲೇ ತಂಡಗಳನ್ನು ರಚಿಸಿ ಸಮರ್ಪಕ ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದು ಬಿಇಒಗಳಿಗೆ ಎಚ್ಚರಿಕೆ ನೀಡಿದರು.
**
ತಾಲ್ಲೂಕು ಶಾಲೆಯಿಂದ ಹೊರಗುಳಿದ ಮಕ್ಕಳು
ಕೋಲಾರ 39
ಮುಳಬಾಗಿಲು 14
ಮಾಲೂರು 07
ಬಂಗಾರಪೇಟೆ 03
ಕೆಜಿಎಫ್‌ 20
ಶ್ರೀನಿವಾಸಪುರ 23

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !