ಶಾಸಕ ಶ್ರೀರಾಮುಲು ಹೇಳಿಕೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‍ಬಾಬು ಖಂಡನೆ

7

ಶಾಸಕ ಶ್ರೀರಾಮುಲು ಹೇಳಿಕೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‍ಬಾಬು ಖಂಡನೆ

Published:
Updated:
Deccan Herald

ಚಿತ್ರದುರ್ಗ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಾಯಕತ್ವ ವಹಿಸಿಕೊಳ್ಳುವುದಾಗಿ ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಈಚೆಗೆ ನೀಡಿದ್ದ ಹೇಳಿಕೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಯೋಗೇಶ್‍ಬಾಬು ಖಂಡಿಸಿದ್ದಾರೆ.

ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದ ಜನತೆ ಅವರನ್ನು ಗೆಲ್ಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತರಲು ಸರ್ಕಾರದ ಗಮನ ಸೆಳೆಯುವುದನ್ನು ಬಿಟ್ಟು ರಾಜ್ಯ ವಿಂಗಡಿಸುವಂತ ಹೇಳಿಕೆ ನೀಡುವುದು ಮೂರ್ಖತನದ ಪರಮಾವಧಿ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಈ ಹಿಂದಿನ ಶಾಸಕರ ಅವಧಿಯಲ್ಲಿ ಚಾಲನೆಗೊಂಡ ಕೆಲ ಕಾಮಗಾರಿಗಳಿಗೆ ಶ್ರೀರಾಮುಲು ಅವರು ಎರಡನೆ ಬಾರಿ ಶಂಕುಸ್ಥಾಪನೆ ನೆರವೇರಿಸಿರುವುದು ಸರಿಯೇ ಎಂದು ಪ್ರಶ್ನಿಸಿದ ಬಾಬು, ಆಹ್ವಾನ ಪತ್ರಿಕೆ ಮುದ್ರಿಸದೆ ತರಾತುರಿಯಲ್ಲಿ ಕಾಮಗಾರಿಗಳನ್ನು ಉದ್ಘಾಟಿಸುವ ಅಗತ್ಯವೇನಿತ್ತು. ಯಾವುದೇ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ಇದರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಅಧಿಕಾರಿಗಳು ಶಾಸಕರೇಳಿದಂತೆ ಕೇಳುತ್ತಿದ್ದು, ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ ಎಂದರು.

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತುಂಗಭದ್ರಾ ಹಿನ್ನೀರು ಕಾಮಗಾರಿ ಯೋಜನೆಗೆ ಹಿಂದಿನ ಸರ್ಕಾರ ರೂ 1750 ಕೋಟಿ ಅನುದಾನ ಮಂಜೂರು ಮಾಡಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದರ ಮಾಹಿತಿ ಅರಿಯದೇ ಶ್ರೀರಾಮುಲು ಯೋಜನೆಗಾಗಿ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಕ್ಷೇತ್ರದಲ್ಲಿ ಕೃಷಿ ಅಭಿವೃದ್ಧಿ ಪಡಿಸಲು ಇಸ್ರೇಲ್ ಮಾದರಿ ಅನುಸರಿಸುವುದಾಗಿ ಹೇಳುತ್ತ ವಂಚಿಸಲು ಮುಂದಾಗಿದ್ದಾರೆ. ಎಸ್‍ಎಫ್‍ಸಿ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಿ ಸ್ವಂತ ಹಣದಿಂದ ಕೊರೆಸಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಕುಡಿಯುವ ನೀರಿಗಾಗಿ ರೂ 6.5 ಕೋಟಿ ಬಿಡುಗಡೆಯಾಗಿರುವುದು ಶ್ರೀರಾಮುಲು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಪ್ರದೇಶವಾದ ಮೊಳಕಾಲ್ಮುರು ವಿವಿಧ ರೀತಿಯ ಸಮಸ್ಯೆ ಎದುರಿಸುತ್ತಿದೆ. ಇದರ ಪರಿವೇ ಇಲ್ಲದ ಶ್ರೀರಾಮುಲು ಅವರು ತಮ್ಮ ಸ್ಥಾನದ ಘನತೆ ಮರೆತಂತೆ ಕಾಣುತ್ತಿದೆ. ಮತ ಹಾಕಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತಂದು ಕೆಲಸ ಮಾಡಿದರೆ, ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆ ಎಂದರು.

ಮೊಳಕಾಲ್ಮುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ. ಪಾಪನಾಯಕ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‍ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ. ಚಂದ್ರಪ್ಪ, ಓಬಿಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ದಾದಾಪೀರ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !