ವಿದ್ಯಾರ್ಥಿನಿ ಕೊಲೆ ಪ್ರಕರಣ: ಆ.6ಕ್ಕೆ ಮಾಲೂರು ತಾಲ್ಲೂಕು ಬಂದ್‌ಗೆ ಕರೆ

7

ವಿದ್ಯಾರ್ಥಿನಿ ಕೊಲೆ ಪ್ರಕರಣ: ಆ.6ಕ್ಕೆ ಮಾಲೂರು ತಾಲ್ಲೂಕು ಬಂದ್‌ಗೆ ಕರೆ

Published:
Updated:

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ವಿವಿಧ ಸಂಘಟನೆಗಳು ಆ.6ಕ್ಕೆ ಮಾಲೂರು ತಾಲ್ಲೂಕು ಬಂದ್‌ಗೆ ಕರೆ ನೀಡಿವೆ.

ಪ್ರಕರಣ ಸಂಬಂಧ ಮಾಲೂರಿನಲ್ಲಿ ಗುರುವಾರ ಸಂಜೆ ಸಭೆ ನಡೆಸಿದ ದಲಿತ, ವಿದ್ಯಾರ್ಥಿ ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ನಡೆಸಿ, ಆ.4ರದು ತಾಲ್ಲೂಕು ಬಂದ್‌ ಆಚರಿಸಲು ನಿರ್ಣಯ ಕೈಗೊಂಡರು.

ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಸಂಘಟನೆಗಳ ಸದಸ್ಯರನ್ನು ಭೇಟಿಯಾಗಿ, ‘ತಾಲ್ಲೂಕು ಬಂದ್‌ಗೆ ಕರೆ ನೀಡಬೇಡಿ’ ಎಂದು ಮನವಿ ಮಾಡಿದರು. ಆದರೆ, ಸದಸ್ಯರು ಮನವಿಗೆ ಸ್ಪಂದಿಸಲಿಲ್ಲ.

ಅಂತಿಮವಾಗಿ ಸೆಪಟ್‌, ‘ಆರೋಪಿಗಳ ಬಂಧನಕ್ಕೆ ಆ.5ರವರೆಗೆ ಕಾಲಾವಕಾಶ ನೀಡಿ. ಆವರೆಗೆ ಬಂದ್‌ನ ನಿರ್ಧಾರ ಮುಂದೂಡಿ’ ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಸದಸ್ಯರು, ಆ.6ರಂದು ತಾಲ್ಲೂಕು ಬಂದ್‌ ಮಾಡಲು ನಿರ್ಧರಿಸಿದರು.

‘ಬಂದ್‌ ಆಚರಣೆ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ತರಬಾರದು. ಶಾಂತಿಯುತವಾಗಿ ಹೋರಾಟ ನಡೆಸಬೇಕು. ಬಂದ್‌ ಸೋಗಿನಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ, ಜನರಿಗೆ ತೊಂದರೆ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಸೆಪಟ್‌ ಎಚ್ಚರಿಕೆ ನೀಡಿದರು.

ಐಜಿಪಿ ಪರಿಶೀಲನೆ: ಪ್ರಕರಣ ಖಂಡಿಸಿ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಂಡಿದ್ದರಿಂದ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್‌, ವಿದ್ಯಾರ್ಥಿನಿಯ ಕೊಲೆ ನಡೆದ ಸ್ಥಳಕ್ಕೆ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಪ್ರಕರಣ ಸಂಬಂಧ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿ ತನಿಖೆ ಕುರಿತು ಮಾರ್ಗದರ್ಶನ ನೀಡಿದರು.

‘ಪ್ರಕರಣವು ತನಿಖೆ ಹಂತದಲ್ಲಿದೆ. ಹೀಗಾಗಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದಿಲ್ಲ. ಸದ್ಯದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ’ ಎಂದು ದಯಾನಂದ್‌ ಸುದ್ದಿಗಾರರಿಗೆ ತಿಳಿಸಿದರು.

ಹಿಂಬಾಲಿಸಿ ಕೃತ್ಯ: ಆರೋಪಿಯು ಶಾಲೆ ಬಳಿಯಿಂದಲೇ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಬಂದು ಕೃತ್ಯ ಎಸಗಿರುವ ಶಂಕೆ ಇದೆ. ಹೀಗಾಗಿ ಶಾಲಾ ಕಟ್ಟಡದ ಪ್ರವೇಶ ಭಾಗದ ಹಾಗೂ ವಿದ್ಯಾರ್ಥಿನಿ ನಡೆದು ಹೋದ ಮಾರ್ಗದಲ್ಲಿನ ವಿವಿಧ ಕಟ್ಟಡಗಳು ಮತ್ತು ವೃತ್ತಗಳಲ್ಲಿ ಇರುವ ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !