ಐರ್ಲೆಂಡ್‌ಗೆ ಮಣಿದ ರಾಣಿ ಬಳಗ

7
ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿ: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆ

ಐರ್ಲೆಂಡ್‌ಗೆ ಮಣಿದ ರಾಣಿ ಬಳಗ

Published:
Updated:

ಲಂಡನ್‌: ಭಾರತ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3–1ರಿಂದ ಮಣಿಸಿದ ಐರ್ಲೆಂಡ್ ಮಹಿಳೆಯರು ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ಇಲ್ಲಿನ ಲೀ ವ್ಯಾಲಿ ಹಾಕಿ ಅಂಗಣದಲ್ಲಿ ಗುರುವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಐರ್ಲೆಂಡ್ ಮೂರು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರೆ ಭಾರತ ಒಮ್ಮೆ ಮಾತ್ರ ಯಶಸ್ಸು ಕಂಡಿತು. ಮೊದಲ ಪ್ರಯತ್ನ ನಡೆಸಿದ ಐರ್ಲೆಂಡ್‌ನ ನಿಕೋಲಾ ಡ್ಯಾಲಿ ಅವರ ಮುನ್ನಡೆಯನ್ನು ತಡೆಯುವಲ್ಲಿ ಭಾರತದ ಗೋಲ್‌ಕೀಪರ್‌ ಸವಿತಾ ಯಶಸ್ವಿಯಾದರು. ಆದರೆ ಭಾರತದ ಪರವಾಗಿ ನಾಯಕಿ ರಾಣಿ ರಾಂಪಾಲ್‌ ಅವರಿಗೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

ಐರ್ಲೆಂಡ್‌ನ ಎರಡನೇ ಪ್ರಯತ್ನವನ್ನು ನಡೆಸಿದವರು ಒಫ್ಲಾಂಗಾನ್ ಅನಾ. ಇದನ್ನು ಕೂಡ ಸವಿತಾ ವಿಫಲಗೊಳಿಸಿದರು. ಭಾರತದ ಎರಡನೇ ಪ್ರಯತ್ನದಲ್ಲಿ ಮೋನಿಕಾ ವೈಫಲ್ಯ ಕಂಡರು. ಮೂರನೇ ಪ್ರಯತ್ನದಲ್ಲಿ ರಾಯ್ಸಿನ್ ಅಪ್ಟಾನ್‌ ಗೋಲು ಗಳಿಸಿ ಐರ್ಲೆಂಡ್ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಭಾರತದ ಮೂರನೇ ಪ್ರಯತ್ನವನ್ನು ನವಜ್ಯೋತ್ ಕೌರ್‌ ಕೈಚೆಲ್ಲಿದರು. ನಾಲ್ಕನೇ ಪ್ರಯತ್ನದಲ್ಲಿ ಮೀಕಿ ಅಲಿಸನ್ ಗೋಲು ಗಳಿಸಿ ಐರ್ಲೆಂಡ್‌ ತಂಡವನ್ನು ಜಯದ ಸನಿಹ ಕೊಂಡೊಯ್ದರು. ಪ್ರತಿಯಾಗಿ ಗೋಲು ಗಳಿಸಿದ ರೀನಾ ಭಾರತದ ಪಾಳಯದಲ್ಲಿ ಭರವಸೆ ಮೂಡಿಸಿದರು. ಆದರೆ ಕೊನೆಯ ಪ್ರಯತ್ನದಲ್ಲಿ ವಾಲ್ಟಿನ್ಸ್ ಕ್ಲಾ ಅವರನ್ನು ತಡೆಯಲು ಸವಿತಾ ವಿಫಲರಾಗುತ್ತಿದ್ದಂತೆ ಐರ್ಲೆಂಡ್ ಆಟಗಾರ್ತಿಯರು ಕುಣಿದು ಕುಪ್ಪಳಿಸಿದರು.

ಸಮಬಲದ ಹೋರಾಟ: ಭಾರತದ ಆಕ್ರಮಣ ಮತ್ತು ಐರ್ಲೆಂಡ್‌ನ ರಕ್ಷಣಾತ್ಮಕ ಆಟಕ್ಕೆ ಪೂರ್ತಿ ಪಂದ್ಯ ಸಾಕ್ಷಿಯಾಯಿತು. ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳಿಗೂ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿರಲಿಲ್ಲ. ಕೊನೆಯ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಲಭಿಸಿದ ಅವಕಾಶ ಸದುಪಯೋಗಪಡಿಸಿಕೊಳ್ಳಲು ಆಗಲಿಲ್ಲ.

ಸೆಮಿಫೈನಲ್ ಪಂದ್ಯಗಳು ಶನಿವಾರ ನಡೆಯಲಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !