ಶತಮಾನ ಕಂಡ ಶಾಲೆ; ಮಕ್ಕಳಿಗೆ ಅಚ್ಚುಮೆಚ್ಚು

7
ಹುನ್ನೂರು: ವಂತಿಗೆ ಸಂಗ್ರಹಿಸಿ ನರ್ಸರಿ ವಿಭಾಗ ನಡೆಸುವ ಶಿಕ್ಷಕರು

ಶತಮಾನ ಕಂಡ ಶಾಲೆ; ಮಕ್ಕಳಿಗೆ ಅಚ್ಚುಮೆಚ್ಚು

Published:
Updated:
Deccan Herald

ಜಮಖಂಡಿ: ಈ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ ಮಕ್ಕಳಿಗೆ ಇಂಗ್ಲಿಷ್ ಕಲಿಸಲಾಗುತ್ತಿದೆ. ಪುಟ್ಟ ಕಂದಮ್ಮಗಳಿಗೆ ಕಲಿಸಲು ಬರುವ ಅತಿಥಿ ಶಿಕ್ಷಕರಿಗೆ ಶಾಲೆಯ ಉಳಿದ ಶಿಕ್ಷಕರು ತಲಾ ₹500 ವಂತಿಗೆ ಸಂಗ್ರಹಿಸಿ ಗೌರವಧನ ನೀಡುತ್ತಿದ್ದಾರೆ. ಈ ಸಂಗತಿ ಕಾಣಸಿಗುವುದು ಸಮೀಪದ ಹುನ್ನೂರಿನ ಸರ್ಕಾರಿ ಶಾಲೆಯಲ್ಲಿ!.

ಒಂದೆಡೆ ಮಕ್ಕಳ ಕೊರತೆ ಕಾರಣ ಸರ್ಕಾರಿ ಶಾಲೆಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಆದರೆ ಹುನ್ನೂರಿನ ಸರ್ಕಾರಿ ಶಾಲೆಯಲ್ಲಿ ಮಾತ್ರ ಶಿಕ್ಷಕರ ಮುತುವರ್ಜಿಯಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಸುತ್ತಲಿನ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಗುಣಮಟ್ಟದ ಶಿಕ್ಷಣವನ್ನು ಇಲ್ಲಿನ ಶಿಕ್ಷಕರು ನೀಡುತ್ತಿದ್ದಾರೆ. ಉತ್ತಮ ಫಲಿತಾಂಶ ಹಾಗೂ ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆ ಕಂಡುಬರುತ್ತಿರುವ ಕಾರಣ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಮನಸ್ಸು ಮಾಡುತ್ತಿಲ್ಲ.  

ಏಳು ವರ್ಷಗಳ ಹಿಂದೆ: ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ಆರಂಭಿಸಿ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಶಿಕ್ಷಣ ಇಲಾಖೆ ಈಗ ಮುಂದಾಗಿದೆ. ಆದರೆ ಹುನ್ನೂರ ಶಾಲೆಯಲ್ಲಿ ಏಳು ವರ್ಷಗಳ ಹಿಂದೆಯೇ ಈ ಪ್ರಯೋಗ ನಡೆದು ಯಶಸ್ವಿಯಾಗಿದೆ. ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಶಿಕ್ಷಕರ ನೇಮಕಾತಿ ಇಲ್ಲ. ಹಾಗಾಗಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. ಅದಕ್ಕೆ ಶಾಲೆಯಲ್ಲಿರುವ 22 ಶಿಕ್ಷಕರು ಮಾಸಿಕ ₹500 ವಂತಿಗೆ ನೀಡುತ್ತಿದ್ದಾರೆ.

‘ಪ್ರಸಕ್ತ ಸಾಲಿನಲ್ಲಿ ಎಲ್‌ಕೆಜಿ ಮತ್ತು ಯುಕೆಜಿನಲ್ಲಿ 80 ಮಕ್ಕಳು ಇದ್ದಾರೆ. ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿದ್ದರಿಂದ ಶಾಲೆಯಲ್ಲಿ 1ನೇ ತರಗತಿಗೆ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ಆಗುತ್ತಿದೆ. ಎಲ್‌ಕೆಜಿ ಮತ್ತು ಯುಕೆಜಿಗೆ ಶಿಕ್ಷಕರ ನೇಮಕಾತಿ ನಡೆಯಬೇಕು. ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಪೂರಕವಾದ ಬೋಧನಾ ಪರಿಕರಗಳನ್ನು ನೀಡಬೇಕು’ ಎಂದು ಶಿಕ್ಷಕ ಬಿ.ಎಂ. ಲಕ್ಷ್ಮೇಶ್ವರ ಹೇಳುತ್ತಾರೆ.

‘ಖಾಸಗಿ ಶಾಲೆಯ ಜೊತೆಗೆ ಸಮರ್ಥ ಪೈಪೋಟಿ ನೀಡಬೇಕಾದರೆ ಇಂಗ್ಲಿಷ್‌ ಮಾಧ್ಯಮ ಮಕ್ಕಳಿಗೆ ಬೋಧಿಸಲು ಸ್ಮಾರ್ಟ್‌ ಬೋರ್ಡ್‌ಗಳು ಬೇಕು. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕಾದ ತೀವ್ರ ಅಗತ್ಯವಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹನಮಂತ ಗುರವ ಹೇಳುತ್ತಾರೆ.

ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಕೆಎಎಸ್‌ ಅಧಿಕಾರಿಗಳಾಗಿ, ನ್ಯಾಯಾಧೀಶರಾಗಿ, ಡಿವೈಎಸ್ಪಿಯಾಗಿ, ಸಿಟಿಒ ಆಗಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯ ಮಕ್ಕಳು ಮೊರಾರ್ಜಿ, ನವೋದಯ, ಆರ್‌ಎಂಎಸ್‌ಎ ಆದರ್ಶ, ಸೈನಿಕ ಶಾಲೆಗೆ ಆಯ್ಕೆಯಾಗುತ್ತಾರೆ. ಇದಕ್ಕೆಲ್ಲ ಗ್ರಾಮಸ್ಥರ ಪ್ರೋತ್ಸಾಹವೇ ಕಾರಣ ಎಂದು ಶಿಕ್ಷಕರು  ಹೇಳುತ್ತಾರೆ.

ಇನ್ಫೋಸಿಸ್‌ ಕಂಪನಿ 11 ಕಂಪ್ಯೂಟರ್‌ ನೀಡಲು ಮುಂದೆ ಬಂದಿದೆ. ಇದೇ ಶಾಲೆಯ ಶಿಕ್ಷಕ ಬಿ.ಡಿ. ತೇಲಿ ಎಂಬುವವರು ಒಂದು ಪ್ರೊಜೆಕ್ಟರ್‌ ನೀಡಲು ಮುಂದೆ ಬಂದಿದ್ದಾರೆ. ಕೊಡುಗೈ ದಾನಿಗಳಿಂದ ಪಡೆದ ದೇಣಿಗೆ ಹಣದಲ್ಲಿ ಕುರ್ಚಿ ಖರೀದಿಸಲಾಗಿದೆ. ಬಹುತೇಕ ಕೊಠಡಿಗಳಿಗೆ ಹಸಿರು ಬೋರ್ಡ್‌ ಹಾಕಲಾಗಿದೆ.

ಮಧ್ಯಾಹ್ನದ ಬಿಸಿಯೂಟದ ಅಡುಗೆ ಕೋಣೆ ಚನ್ನಾಗಿದೆ. ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಉದ್ಯಾನ ಬೆಳೆಸಲಾಗಿದೆ. ‘ಸರ್ಕಾರ ಸ್ವಲ್ಪ ಕೈಜೋಡಿಸಿದರೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಬಾಗೇನವರ ಹೇಳುತ್ತಾರೆ.

ಸರ್ಕಾರಿ ಮಾದರಿ ಶಾಲೆ, ಹುನ್ನೂರು
1ರಿಂದ 8ನೇ ತರಗತಿವರೆಗೆ 
800 ವಿದ್ಯಾರ್ಥಿಗಳು
ಶಾಲೆ ಆರಂಭ: 1887 ರ ಫೆಬ್ರುವರಿ 10

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !