ಒಣಗಿದ ಕಬ್ಬು ಕಿತ್ತು ಹಾಕಿದ ರೈತ

7
ಮಳೆ ಕೊರತೆ; ಕೊಳವೆ ಬಾವಿಗಳ ವೈಫಲ್ಯದಿಂದ ಬೇಸತ್ತ ಪುಂಡಲೀಕ

ಒಣಗಿದ ಕಬ್ಬು ಕಿತ್ತು ಹಾಕಿದ ರೈತ

Published:
Updated:
Deccan Herald

ಕುಳಗೇರಿ ಕ್ರಾಸ್ (ಬಾಗಲಕೋಟೆ): ಮಳೆ ಇಲ್ಲದೇ ಅತ್ತ ಕೊಳವೆ ಬಾವಿಗಳಲ್ಲೂ ನೀರು ಕಾಣದೇ ಬೇಸತ್ತ ಬಾದಾಮಿ ತಾಲ್ಲೂಕಿನ ಮಮಟಗೇರಿಯ ರೈತ ಪುಂಡಲೀಕ ಕುಮ್ಮಿ ಒಣಗುತ್ತಿದ್ದ ಮೂರು ಎಕರೆ ಕಬ್ಬನ್ನು ಶನಿವಾರ ಕಿತ್ತು ಹಾಕಿದ್ದಾರೆ.

ಜುಲೈ ಮೊದಲ ವಾರದ ಒಂದಷ್ಟು ಮಳೆಯಾಗಿದ್ದು ಬಿಟ್ಟರೆ ಬಾದಾಮಿ ತಾಲ್ಲೂಕಿನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಮೋಡ ಮುಚ್ಚಿದ ವಾತಾವರಣ ಇದ್ದರೂ ಮಳೆಯಾಗುತ್ತಿಲ್ಲ. ಇನ್ನೊಂದೆಡೆ ಕೊಳವೆ ಬಾವಿಯಲ್ಲೂ ನೀರು ಇಲ್ಲವಾಗಿದೆ. ಪುಂಡಲೀಕ ಅವರು ಇಲ್ಲಿಯವರೆಗೂ ಎಂಟು ಕೊಳವೆ ಬಾವಿ ಕೊರೆಸಿದ್ದು, ಕಬ್ಬಿನ ಗದ್ದೆಯ ಬಾಯಾರಿಕೆ ನೀಗಿಸಲು ಎಲ್ಲವೂ ವಿಫಲವಾಗಿವೆ. ಇದರಿಂದ ಮನನೊಂದ ಅವರು ಹೊಲದಲ್ಲಿದ್ದ ಕಬ್ಬಿನ ಬೆಳೆಯನ್ನು ಟ್ರ್ಯಾಕ್ಟರ್‌ನಲ್ಲಿ ರೋಲ್ಟವೇಟರ್ ಬಳಸಿ ನಾಶಪಡಿಸಿದ್ದಾರೆ.

ಹೊಲದ ಬಳಿ ಹಾದು ಹೋಗಿರುವ ಮಲಪ್ರಭಾ ಕಾಲುವೆಯಲ್ಲೂ ನೀರು ಹರಿದಿಲ್ಲ. ಅಲ್ಲಿಗೆ ನೀರು ಬಿಟ್ಟಿದ್ದರೆ ಕಬ್ಬಿನ ಗದ್ದೆ ಒಂದಷ್ಟು ದಿನ ಜೀವ ಹಿಡಿಯುತ್ತಿತ್ತು. ಹೊಲಕ್ಕೆ ನೀರು ಹೊಂಚುವ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಅವರು ಕಬ್ಬಿನ ಬೆಳೆ ಕಿತ್ತುಹಾಕಲು ಮುಂದಾಗಿದ್ದಾರೆ.

ಪುಂಡಲೀಕ ಅವರಿಗೆ ನಾಲ್ಕು ಎಕರೆ ಜಮೀನು ಇದೆ. ಅದರಲ್ಲಿ ಮೂರು ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಒಂದು ಎಕರೆ ಗೋವಿನಜೋಳ ಇದೆ. ಮೊದಲಿದ್ದ ಕೊಳವೆ ಬಾವಿ ವಿಫಲವಾದ ನಂತರ ಒಂದರ ನಂತರ ಒಂದರಂತೆ ಎಂಟು ಕೊಳವೆ ಬಾವಿ ಕೊರೆಸಿದ್ದಾರೆ. 

‘ನೀರು ಬೀಳಬಹುದು ಎಂಬ ಸಣ್ಣ ಆಸೆಯಿಂದ ದೊಡ್ಡ ಸಾಹಸಕ್ಕೆ ಕೈಹಾಕಿದೆ. ಕೊಳವೆಬಾವಿ ಕೊರೆಸಲು ಪತ್ನಿ ಮೈಮೇಲಿನ ಚಿನ್ನಾಭರಣ ಒತ್ತೆ ಇಟ್ಟು, ರಾಷ್ಟ್ರೀಕೃತ ಬ್ಯಾಂಕಿನಿಂದ ₹2.5 ಲಕ್ಷ ಸಾಲ ಪಡೆದು, ಒಟ್ಟು ₹5 ಲಕ್ಷ ಖರ್ಚು ಮಾಡಿದ್ದೇನೆ. ನಮ್ಮ ಗ್ರಹಚಾರ ಸರಿ ಇಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ ಸುಸ್ತಿದಾರರ ಸಾಲ ಮಾತ್ರ ಮನ್ನಾ ಮಾಡಿದ್ದಾರೆ. ಹಾಗಾಗಿ ಕೆವಿಜಿ ಬ್ಯಾಂಕ್‌ನಲ್ಲಿನ ಸಾಲ ಕೂಡ ತೀರಲಿಲ್ಲ’ ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಎದುರು  ಅಳಲು ತೋಡಿಕೊಂಡರು. ಈಗ ಗೋವಿನ ಜೋಳವೂ ಒಣಗುತ್ತಿದೆ.

ಜಿಲ್ಲೆಯಲ್ಲಿ ಮಳೆ ಕೊರತೆ

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದೆ. ಜೂನ್ ತಿಂಗಳಲ್ಲಿ ಬಿದ್ದ ಹದ ಮಳೆಯ ಕಾರಣಕ್ಕೆ ಬಿತ್ತನೆ ಮಾಡಿದ್ದ ರೈತರು ಈಗ ಮುಗಿಲು ನೋಡುತ್ತಾ ಕುಳಿತಿದ್ದಾರೆ. ಮೋಡ ಕಟ್ಟುತ್ತಿದೆಯೇ ಹೊರತು ಹನಿಯಾಗುತ್ತಿಲ್ಲ. ಆಗಸ್ಟ್ 3ರವರೆಗೆ ಜಿಲ್ಲೆಯಲ್ಲಿ 244.6 ಮಿ.ಮೀ ವಾಡಿಕೆ ಮಳೆಯಾಗಬೇಕಿದೆ. ಆದರೆ 204.3 ಮಿ.ಮೀ ಆಗಿದೆ. ಶೇ 83.5ರಷ್ಟು ಮಾತ್ರ ಮಳೆಯಾಗಿದೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !