ಆ.10ರಂದು ನಗರ ಬಂದ್‌ಗೆ ಕರೆ

7
ನಗರಸಭೆ ವಿರುದ್ಧ ಬಂದ್‌ ಆಚರಿಸಲು ಸಂಘಟನೆಗಳಿಂದ ತೀರ್ಮಾನ

ಆ.10ರಂದು ನಗರ ಬಂದ್‌ಗೆ ಕರೆ

Published:
Updated:
Deccan Herald

ಕೋಲಾರ: ನರಗದಲ್ಲಿ ಹಾನಿಯಾಗಿರುವ ರಸ್ತೆಗಳ ದುರಸ್ತಿ ಹಾಗೂ ನಗರದ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿರುವ ನಗರಸಭೆಯ ವಿರುದ್ಧ ಆ.10ರಂದು ನಗರ ಬಂದ್‌ಗೆ ಕರೆ ನೀಡಲಾಗಿದೆ’ ಎಂದು ಪ್ರಗತಿಪರ ಸಂಘಟನೆಗಳ ಮುಖಂಡ ವೆಂಕಟೇಶ್‌ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ‘ನಗರಸಭೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆಯಿಲ್ಲದೆ ನಗರವಾಸಿಗಳು ಅನೇಕ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ’ ಎಂದರು.

‘ಹಿಂದೆ ಮಳೆ ಸುರಿದು ನಗರದಲ್ಲಿ ಪ್ರಮುಖ ರಸ್ತೆಗಳು ಹಾನಿಯಾಗಿವೆ. ಸಂಪರ್ಕ ರಸ್ತೆಗಳು ಸಮರ್ಪಕವಾಗಿಲ್ಲ. ಇದನ್ನು ದುರಸ್ತಿಪಡಿಸುವಂತೆ ನಗರಸಭೆಗೆ ಅನೇಕ ಭಾರಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.

‘ಅಮೃತ್ ಸಿಟಿ ಯೋಜನೆಯಡಿ ಯುಜಿಡಿಗಾಗಿ ರಸ್ತೆ ಅಗೆದು ಅಧ್ವಾನ ಮಾಡಿದ್ದಾರೆ. ರಸ್ತೆಗಳಲ್ಲಿನ ಹಳ್ಳಗಳಿಂದ ದ್ವಿಚಕ್ರ ವಾಹನ ಸವಾರರು ಆಗಾಗ್ಗೆ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ನಗರಸಭೆಯಿಂದ ನಗರದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲೆಂದರದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲಂದರಲ್ಲಿ ಯುಜಿಡಿ ಪೈಪ್, ಮ್ಯಾನ್‌ಹೋಲ್‌ಗಳು ಹಾನಿಯಾಗಿ ಕೊಳಚೆ ನೀರು ರಸ್ತೆ, ಚರಂಡಿ, ರಾಜಕಾಲುವೆಯಲ್ಲಿ ಹರಿಯುತ್ತಿದೆ. ಕೀಲುಕೋಟೆ ಬಡಾವಣೆಯಲ್ಲಿನ ಕೆವಿಎಸ್ ಕಲ್ಯಾಣ ಮಂಟಪ ಬಳಿ ಯುಜಿಡಿ ತ್ಯಾಜ್ಯ ನೀರು ರಾಜಕಾಲುವೆ ಮೂಲಕ ಕೋಲಾರಮ್ಮ ಕೆರೆಗೆ ಸೇರುತ್ತಿದೆ. ಇದನ್ನು ಸರಿಪಡಿಸುವಂತೆ ನಗರಸಭೆಯ ಮುಂದೆ ಧರಣಿ ನಡೆಸಿದ್ದರೂ ಏನು ಪ್ರಯೋಜನೆಯಾಗಿಲ್ಲ. ಅನೇಕ ಭಾರಿ ಅಧ್ಯಕ್ಷರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಯೂ ಒತ್ತಡಗಳಿಗೆ ಮಣಿದು ದುರಸ್ತಿಗೆ ಮುಂದಾಗಿಲ್ಲ’ ಎಂದು ಟೀಕಿಸಿದರು.

‘ಅಮೃತ್ ಸಿಟಿ ಯೋಜನೆಯಡಿ ನಗರದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಗಳನ್ನು ಅಗೆದು ಹಾನಿ ಪಡಿಸಲಾಗಿದೆ. ಇದರಲ್ಲಿ ನಡೆದಿರುವ ಅವ್ಯವಹಾರ ಕುರಿತು ಜಿಲ್ಲಾಡಳಿತ ತನಿಖೆ ನಡೆಯಬೇಕು’ ಎಂದು ವರ್ತಕರ ಸಂಘದ ಕಾರ್ಯದರ್ಶಿ ಡಿ.ಜೆ.ಮನೋಹ್ ಒತ್ತಾಯಿಸಿದರು.

‘ಯುಜಿಡಿಗಾಗಿ ಅಗೆದಿರುವ ರಸ್ತೆಯನ್ನು ನಗರಸಭೆ ದುರಸ್ತಿ ಮಾಡಬೇಕೋ, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಡಬೇಕೋ, ಮೇಲ್ವಿಚಾರಣೆ ಮಾಡುವವರು ಯಾರು ?. ಹದಗೆಟ್ಟ ರಸ್ತೆಯಿಂದ ವಾಹನಗಳು ಗ್ಯಾರೇಜ್‌ಗಳಿಗೆ ಸೇರುವ ಪರಿಸ್ಥಿತಿ ಎದುರಾಗಿದೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಯರಾಮ್ ಮಾತನಾಡಿ, ‘ನಗರದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದು, ಬಗೆಹರಿಸುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ. ಆ.10ರಂದು ಕರೆ ನೀಡಲಾಗಿರುವ ಬಂದ್‌ಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಬೇಕು’ ಎಂದು ಕೋರಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆಟೊ ಚಾಲಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಚಂಬೆ ರಾಜೇಶ್, ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಶ್ರೀನಿವಾಸ್, ದ್ವಿಚಕ್ರ ವಾಹನಗಳ ಮೆಕಾನಿಕ್ ಸಂಘದ ಮುಜೀರ್‌ಷಾಪ, ಟಿಪ್ಪು ಸೆಕ್ಯುಲರ್ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಆಸೀಫ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !