ರೈತರಿಂದ ರಸ್ತೆ ತಡೆದು ಪ್ರತಿಭಟನೆ

7
ಫಸಲ್ ಬಿಮಾ ಪರಿಹಾರದಲ್ಲಿ ತಾರತಮ್ಯದ ಆರೋಪ

ರೈತರಿಂದ ರಸ್ತೆ ತಡೆದು ಪ್ರತಿಭಟನೆ

Published:
Updated:
Deccan Herald

ಬೆನಕಟ್ಟಿ (ಬಾಗಲಕೋಟೆ): ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ರೈತರಿಗೆ ಬೆಳೆ ಪರಿಹಾರ ಮೊತ್ತ ನಿಗದಿಯಲ್ಲಿ ಆಗಿರುವ ತಾರತಮ್ಯ ನಿವಾರಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹಳ್ಳೂರ, ಭಗವತಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಸಮೀಪದ ಭಗವತಿ ಕ್ರಾಸ್‌ನಲ್ಲಿ ಶನಿವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಭಗವತಿ, ಹಳ್ಳೂರ, ಬೇವೂರ, ಚೌಡಾಪುರ, ಭೈರಮಟ್ಟಿ ಗ್ರಾಮಗಳ ಮುನ್ನೂರಕ್ಕೂ ಹೆಚ್ಚು ರೈತರು ಬೆಳಿಗ್ಗೆ ಆಲಮಟ್ಟಿ - ಕೂಡಲಸಂಗಮ ರಸ್ತೆಯ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ವಿಮಾ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗಿರುವ ತಾರತಮ್ಯ ಸರಿಪಡಿಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.

2016-17 ನೇ ಸಾಲಿನಲ್ಲಿ ಬೆಳೆ ಪರಿಹಾರ ನಿಗದಿ ವಿಚಾರದಲ್ಲಿ ಬಹಳಷ್ಟು ತಾರತಮ್ಮ ಆಗಿದೆ. ಪಕ್ಕದ ಬೆನಕಟ್ಟಿ, ಬಿಲ್ಕೆರೂರ, ಶಿರೂರ ಗ್ರಾಮಗಳ ರೈತರಿಗೆ ಜೋಳಕ್ಕೆ ಎಕರೆಗೆ ₹12 ಸಾವಿರ ಹಾಗೂ ಕಡಲೆಗೆ ₹4 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ನಮಗೆ ಮಾತ್ರ ಎಕರೆಗೆ ಕೇವಲ ₹ 400 ನಿಗದಿ ಮಾಡಿ ಪರಿಹಾರ ಪ್ರಕಟಿಸಿರುವುದು ಅನ್ಯಾಯವಲ್ಲವೇ ಎಂದು ರೈತರು ಪ್ರಶ್ನಿಸಿದರು. ಈ ರೀತಿ ಅವೈಜ್ಞಾನಿಕವಾಗಿ ಪರಿಹಾರ ನಿಗದಿ ಮಾಡಿದ ವಿಮಾ ಕಂಪೆನಿ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಬೇಕು ಹಾಗೂ ಬೆಳೆ ಕಟಾವು ಮಾಡಿ ತಪ್ಪು ವರದಿ ಕಳುಹಿಸಿದ ಅಧಿಕಾರಿಗಳ ವಿರುದ್ದ ಕರ್ತವ್ಯ ಲೋಪದ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ನಾಲ್ಕು ತಾಸು ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದ ರೈತರು, ವಿಮಾ ಕಂಪನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ರಪಡಿಸಿದರು. ಆಗಿರುವ ಅನ್ಯಾಯ ಸರಿಪಡಿಸುವಂತೆ ಜುಲೈ 27 ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಕೂಡಲೇ ಪರಿಹಾರದ ಭರವಸೆ ನೀಡಿದ್ದ ಅಧಿಕಾರಿಗಳು ಈತನಕ ಮೌನಕ್ಕೆ ಶರಣಾಗಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ರೈತರ ಪಟ್ಟು: ಜಿಲ್ಲಾಧಿಕಾರಿಗಳು ಹಾಗೂ ಇನ್ಸೂರನ್ಸ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಸಮಸ್ಯೆ ಇತ್ಯರ್ಥಪಡಿಸಿ ಸೂಕ್ರ ಪರಿಹಾರ ಪ್ರಕಟಿಸಬೇಕು ಎಂದು ಪಟ್ಟು ಹಿಡಿದ ರೈತರು, ಘೋಷಣೆಗಳನ್ನು ಕೂಗಿದರಲ್ಲದೇ, ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ. ರಮೇಶಕುಮಾರ್, ಉಪ ನಿರ್ದೇಶಕ ಎಸ್.ಬಿ.ಕೊಂಗವಾಡ, ಕೃಷಿ ಅಧಿಕಾರಿ ಚಂದ್ರಕಾಂತ ಪವಾರ್ ಸಮಾಧಾನಗೊಳಿಸುವ ಪ್ರಯತ್ನಕ್ಕೆ ಮುಂದಾದರಾದರೂ ರೈತರು ಒಪ್ಪಲಿಲ್ಲ. ಸ್ಥಳಕ್ಕೆ ವಿಮಾ ಕಂಪೆನಿಯ ಅಧಿಕಾರಿಗಳನ್ನೇ ಕರೆಸಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಥಳಕ್ಕೆ ಬಂದ ಡಿವೈಎಸ್ಪಿ ಎಸ್.ಬಿ. ಗಿರೀಶ್, ರೈತರ ಜೊತೆ ಸಂಧಾನ ನಡೆಸಿ ಹಿರಿಯ ಅಧಿಕಾರಿಗಳು ನೀಡುವ ಭರವಸೆಗೆ ಒಪ್ಪಿ ಪ್ರತಿಭಟನೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಸಿ.ಎಂ.ಮೇಟಿ, ರಾಮಣ್ಣ ಸುನಗದ, ವೆಂಕಟೇಶ ಕುಲಕರ್ಣಿ, ಎಂ.ಎಸ್. ವೈಜಾಪುರ, ರಾಜು ಮುದೇನೂರ, ಎಸ್.ಆರ್.ಮೇಟಿ, ಮಲ್ಲಣ್ಣ ಹೊಸಮನಿ, ಬಸವರಾಜ ಮೇಟಿ, ಮುತ್ತಣ್ಣ ಹಳ್ಳೂರ, ಶಿವು ಹಳ್ಳೂರ, ಹಣಮಂತ ಚಿಮ್ಮಲಗಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಆಗಸ್ಟ್ 18 ರೊಳಗೆ ಜಿಲ್ಲಾಡಳಿತದೊಂದಿಗೆ ಸಭೆ

ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ವಿಮಾ ಕಂಪೆನಿಯ ಪ್ರತಿನಿಧಿಗಳು ಮತ್ತು ರೈತರ ಸಭೆಯನ್ನು ಅಗಸ್ಟ್ 15 ರ ನಂತರ ಆಯೋಜಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಭರವಸೆ ನೀಡಿದರು.

ಕೊನೆಗೂ ರೈತರು ಪಟ್ಟು ಸಡಿಲಿಸಿ ಆಗಸ್ಟ್ 18 ರೊಳಗೆ ಈ ಸಭೆ ಕರೆಯಬೇಕೆಂದು ಹೇಳಿ ಪ್ರತಿಭಟನೆ ಹಿಂಪಡೆದರು.

ಮಾರ್ಗ ಬದಲಾವಣೆ: ಆಲಮಟ್ಟಿ ರಸ್ತೆಯಲ್ಲಿ ರೈತರ ಪ್ರತಿಭಟನೆ ನಡೆದದ್ದರಿಂದಾಗಿ ವಾಹನಗಳು ಹಳ್ಳೂರ-ಬೆನಕಟ್ಟಿ ಮಾರ್ಗವಾಗಿ ಸಂಚರಿಸಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !