ಒತ್ತಡ ಮರೆಯಲು ಕ್ರೀಡೆ ಸಹಕಾರಿ

7

ಒತ್ತಡ ಮರೆಯಲು ಕ್ರೀಡೆ ಸಹಕಾರಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರರಿಗೆ ಕ್ರೀಡಾಕೂಟ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪೂರಕವಾಗಲಿದೆ’ ಎಂದು 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಸಿ.ಭಾನುಮತಿ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಗಂಣದಲ್ಲಿ ಶನಿವಾರ ಆಯೋಜಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

‘ಇವತ್ತು ಮನುಷ್ಯ ಒತ್ತಡದ ನಡುವೆ ವೃತ್ತಿ ನಿರ್ವಹಿಸುತ್ತಿದ್ದಾನೆ. ನಮಗೆ ಸಂತೋಷವಾದಾಗ ಮನಸ್ಸಿನ ನೆಮ್ಮದಿ ದೂರವಾಗುತ್ತದೆ. ವಕೀಲರು ಸಕ್ರಿಯವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮಾನಸಿಕ ಒತ್ತಡ, ಖಿನ್ನತೆ ದೂರವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್ ಮಾತನಾಡಿ, ‘ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ವಕೀಲ ಸಮೂಹ ಮೊದಲು ಆಸಕ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಕ್ರೀಡೆಗಳಿಂದ ಬಾಂಧವ್ಯ ಬೆಸುಗೆ ಜತೆಗೆ ಉಲ್ಲಾಸದ ವಾತಾವರಣ ಲಭಿಸುತ್ತದೆ’ ಎಂದು ಹೇಳಿದರು.

ವಕೀಲರ ಸಂಘದ ಕ್ರೀಡಾ ಸಮಿತಿ ಅಧ್ಯಕ್ಷ ಪಿ.ಸುಬ್ರಮಣಿ ಮಾತನಾಡಿ, '1998ನೇ ಸಾಲಿನಿಂದ ವಕೀಲರ ಸಂಘ ಹಾಗೂ ನ್ಯಾಯಾಲಯ ಸಿಬ್ಬಂದಿಗಳಿಗೆ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ಈ ಬಾರಿ ವಿಜೇತರಿಗೆ ಇತ್ತೀಚೆಗೆ ಮೃತಪಟ್ಟ ಹಿರಿಯ ವಕೀಲ ಬಿ.ಆರ್.ನರಸಿಂಹಮೂರ್ತಿ ಸೇರಿದಂತೆ ಮತ್ತಿತರ ವಕೀಲರ ಹೆಸರಿನಲ್ಲಿ ಮೆಮೋರಿಯಲ್ ಕಪ್ ವಿತರಿಸಲಾಗುವುದು’ ಎಂದರು.

ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿಯೊಂದಿಗೆ ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.
ನ್ಯಾಯಾಧೀಶರಾದ ಸಾಹೇಬ ಸುಲ್ತಾನ, ಅರುಟಗಿ, ಶ್ರೀನಿವಾಸ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ವಿನೋದ್‌ ಕುಮಾರ್, ಹಿರಿಯ ವಕೀಲರಾದ ಕೆ.ಎಂ.ಗೋವಿಂದರೆಡ್ಡಿ, ಎಚ್.ಸಿ.ಪಾಪಿರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !