ಭಾಷೆ ಸ್ತಬ್ದವಾದರೆ ನಾಗರೀಕತೆ ಮೌನ

7
ಭಾಷಾ ಸಂವರ್ಧನೆ– ಕಾರ್ಯಾಗಾರ: ಕುಲಪತಿ ಪ್ರೊ. ಮಹೇಶ್ವರಯ್ಯ

ಭಾಷೆ ಸ್ತಬ್ದವಾದರೆ ನಾಗರೀಕತೆ ಮೌನ

Published:
Updated:
Deccan Herald

ಮಂಗಳೂರು: ಸಂವಹನ ಮಾಡುವ ಭಾಷೆ ಸ್ತಬ್ದವಾದರೆ ನಾಗರೀಕತೆಯೇ ಮೌನವಾಗುತ್ತದೆ. ಯಾವುದೇ ಕಾಲಕ್ಕೂ ಸಂಕೀರ್ಣ ಸಂವಹನ ಸಾಮರ್ಥ್ಯ ಹೊಂದಿರುವ ಭಾಷೆ ಕ್ಷಿಣಿಸದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್‌.ಎಂ. ಮಹೇಶ್ವರಯ್ಯ ಹೇಳಿದರು.

ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಮಂಗಳೂರು ವಿಭಾಗವು ಹಮ್ಮಿಕೊಂಡಿದ್ದ ಭಾಷಾ ಸಂವರ್ಧನೆ– ಕಾರ್ಯಾಗಾರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಧ್ಯಾಪಕ ತನ್ನ ಭಾವನೆ ಹಂಚಿಕೊಳ್ಳುವ ನಿಜವಾದ ಕಾರ್ಯವನ್ನು ಮಾಡಬೇಕು. ಜಗತ್ತಿನಲ್ಲಿ ಯಾವುದೇ ದೇಶದಲ್ಲಿ ಇಲ್ಲದೇ ಇರುವಷ್ಟು ಭಾಷೆ ದೇಶದಲ್ಲಿ ಇವೆ. ಹಾಗಾಗಿಯೇ ಭಾರತವನ್ನು ಭಾಷೆಗಳ ತೊಟ್ಟಿಲು ಎಂದು ಕರೆಯುವುದು. ದೊಡ್ಡ ಭಾಷಾಕೋಶ ಹೊಂದಿರುವ ದೇಶ ನಮ್ಮದು. ಕರಾವಳಿ ಬಹುಭಾಷೆ ತಾಣ. ತುಳು, ಕೊಂಕಣಿ ಸೇರಿದಂತೆ ಎಲ್ಲ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿ ಇದ್ದಾರೆ. ದೇಶದಲ್ಲಿ ಕೆಲವೇ ಭಾಷೆ ಮಾತನಾಡುವ ಜನ ಶೇ 4 ರಷ್ಟು ಇದ್ದಾರೆ. ಇನ್ನೂ ಶೇ 96 ರಷ್ಟು ಜನ ಎಲ್ಲ ಭಾಷೆಗಳನ್ನು ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ಭಾಷೆಯನ್ನು ಕಲಿಕೆಯಿಂದ ಜ್ಞಾನ, ಸಂವಹನ, ಭಾವನಾತ್ಮಕ ಸಂಬಂಧಗಳ ವೃದ್ಧಿ ಆಗುತ್ತವೆ. ಮಾತೃ ಭಾಷೆಯಿಂದ ಹೆಚ್ಚು ಭಾವನಾತ್ಮಕ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಕರಾವಳಿ ಕರ್ನಾಟಕದ ಜನರಲ್ಲಿ ಇಂತಹ ಸಂಬಂಧಗಳನ್ನು ಕಾಣಬಹುದು. ಭಾಷೆ ಎನ್ನುವುದು ನಾಗರೀಕತೆ ಇದ್ದಂತೆ. ‘ನುಡಿ ಅಳಿದರೆ ಜನ ಅಳಿಯುತ್ತಾರೆ’. ದೇಶವು ಭಾಷಾ ಸಂಬಂಧಗಳಲ್ಲಿ ಹೆಚ್ಚು ಗಟ್ಟಿಯಾಗಿದೆ. ಭಾಷಾ ಸಂಬಂಧ ವಾಚಕದಲ್ಲಿ ಕನ್ನಡ ಭಾಷೆ ಸಮೃದ್ಧ ಭಾಷೆಯಾಗಿ ಹೊರಹೊಮ್ಮಿದೆ. ಭಾಷೆಯ ನಾಶವಾದರೇ ಬುದ್ಧಿಶಕ್ತಿಯ ದಾಸ್ತಾನು ನಾಶವಾದಂತೆ. ಭಾಷಾ ಸಂವರ್ಧನೆ ಉಳಿಸುವ ಕೆಲಸ ಆಗಬೇಕು. ದೇಶದಲ್ಲಿ ಕಳೆದ 50 ವರ್ಷಗಳಲ್ಲಿ ಹಲವಾರು ಭಾಷೆ ಕಳೆದುಕೊಂಡಿದ್ದೇವೆ. ಅಳುವಿನಂಚಿನಲ್ಲಿರುವ ಭಾಷೆಗಳ ಬಗ್ಗೆ ಅಧ್ಯಯನ ಕೂಡಾ ನಡೆಯುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್‌ ಆಳ್ವ ಮಾತನಾಡಿ, ಪ್ರಾದೇಶಿಕ ಭಾಷೆಯ ಮೇಲೆ ಸಂಸ್ಕೃತದ ಪ್ರಭಾವ ಹೆಚ್ಚಾಗಿದೆ. ಭಾಷಾ ಸಂವರ್ಧನೆ ಎಂದಿಗೂ ನಿಂತ ನೀರಲ್ಲ. ಅದು ನಿರಂತರವಾಗಿ ಹರಿಯುವ ನದಿ ಇದ್ದಂತೆ. ನಮ್ಮ ಭಾಷೆಗೆ ದೇಶೀಯ ಸ್ಪರ್ಶ ನೀಡುವ ಕೆಲಸ ಆಗಬೇಕು. ಮಾಧ್ಯಮ, ಸಿನಿಮಾ, ಪ್ರಭಾವ ಭಾಷೆಯ ಮೇಲೆ ಹೊರೆಯಾಗಬಾರದು. ಭಾಷೆ ಬೆಳವಣಿಗೆಗೆ ಈ ಕ್ಷೇತ್ರಗಳು ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು.

ತುಳು ಭಾಷೆಯನ್ನು ಯಾವುದೇ ಸಂಘರ್ಷವಿಲ್ಲದೇ ಬೆಳೆಸುವ ಕಾರ್ಯ ನಡೆಯುತ್ತಿದೆ. ಭಾಷಾ ಬೆಳವಣಿಗೆಗೆ ಯಾವುದೇ ರೀತಿಯ ಮಡಿವಂತಿಕೆ ಸರಿಯಲ್ಲ. ಅದರಿಂದ ಅಪಾಯವೂ ಹೆಚ್ಚುತ್ತದೆ. ಕನ್ನಡ ಭಾಷೆಯನ್ನು ಕುಗ್ಗಿಸುವ ಭಾಷೆಗಳ ಬಗ್ಗೆ ಹೆಚ್ಚು ಜಾಗೃತವಾಗಿರಬೇಕು ಎದು ಅವರು ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್‌, ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಸಂಚಾಲಕ ಸಮಿತಿ ಅಧ್ಯಕ್ಷ ರಮೇಶ್‌.ಕೆ, ಕಾರ್ಯದರ್ಶಿ ಶೈಲೇಶ್‌ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !