ಎಲ್ಲೆಡೆ ‘ಗೆಳೆತನ’ದ ಸವಿ ಮೆಲುಕು

7
ಮಾರುಕಟ್ಟೆಯಲ್ಲಿ ಬಗೆ ಬಗೆಯ ‘ಫ್ರೆಂಡ್‌ಶಿಪ್‌ ಡೇ’ ಬ್ಯಾಂಡ್ ಮಾರಾಟ, ಉಡುಗೊರೆಗಳ ಭರ್ಜರಿ ವಹಿವಾಟು

ಎಲ್ಲೆಡೆ ‘ಗೆಳೆತನ’ದ ಸವಿ ಮೆಲುಕು

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಅಂತರರಾಷ್ಟ್ರೀಯ ಸ್ನೇಹಿತರ ದಿನ’ವಾದ ಭಾನುವಾರ ವಾರಾಂತ್ಯದ ಮೋಜಿಗೆ ವಿಶೇಷ ಮೆರಗು ತಂದಿತ್ತು. ನಗರದಲ್ಲಿ ಈ ವಿಶೇಷ ದಿನದ ಸಂಭ್ರಮ ಎಲ್ಲೆಡೆ ಕಂಡುಬಂತು.

ಮಕ್ಕಳು, ಯುವಕರು, ಮಹಿಳೆಯರು, ಹಿರಿಯರೆಲ್ಲ ಬಗೆ ಬಗೆಯ ವಿನ್ಯಾಸದ ‘ಫ್ರೆಂಡ್‌ಶಿಪ್‌ ಡೇ’ ಬ್ಯಾಂಡ್‌ಗಳನ್ನು ತಮ್ಮ ಗೆಳೆಯ, ಗೆಳತಿಯರಿಗೆ ಕಟ್ಟಿ, ಹಂಚಿಕೊಂಡು ಸಿಹಿ ತಿನ್ನುವ ಮೂಲಕ ಗೆಳೆತನದ ಸುಮಧುರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ತಮ್ಮ ಗೆಳೆಯ, ಗೆಳತಿಯರಿಗೆ ಶುಭ ಕೋರುತ್ತಿದ್ದದ್ದು ವಿಶೇಷವಾಗಿತ್ತು.

ಅನೇಕರು ತಮ್ಮ ನೆಚ್ಚಿನ ತಾಣಗಳಿಗೆ ತೆರಳಿ ‘ಫ್ರೆಂಡ್‌ಶಿಪ್‌ ಡೇ’ ಆಚರಿಸುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಇನ್ನು ಕೆಲವರು ಸ್ನೇಹಿತರ ದಿನದ ನೆಪದಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟ, ಸ್ಕಂದಗಿರಿಗೆ ತೆರಳಿ ಕೇಕ್‌ ಕತ್ತರಿಸಿ ಸಂಭ್ರಮಿಸಿ, ಅದನ್ನು ಸೆಲ್ಫಿಯಲ್ಲಿ ಸೆರೆ ಹಿಡಿದು ದಿನವನ್ನು ಅವಿಸ್ಮರಣೀಯವಾಗಿಸಿಕೊಂಡರು.

ಶಾಲಾ, ಕಾಲೇಜುಗಳು ರಜೆ ಇದ್ದ ಕಾರಣಕ್ಕೆ ದಿನವೀಡಿ ಗ್ರೀಟಿಂಗ್ಸ್‌, ಉಡುಗೊರೆ ಕಿಟ್‌, ಮ್ಯಾಚಿಂಗ್‌ ಡ್ರೆಸ್‌ಗಳನ್ನು ಉಡುಗೊರೆ ಕೊಡುವವರ ಓಡಾಟ ಆಗಾಗ ನಗರದಲ್ಲಿ ಗೋಚರಿಸುತ್ತಲೇ ಇತ್ತು. ಮುಂಗೈ ಬಗೆಬಗೆಯ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳನ್ನು ಕಟ್ಟಿಕೊಂಡು ತಮಗೆ ಇರುವ ಸ್ನೇಹ ಬಳಗದ ಬಗ್ಗೆ ಅಭಿಮಾನದ ಮಾತನಾಡುತ್ತ ತಿರುಗಾಡುವವರು ಕಡಿಮೆ ಇರಲಿಲ್ಲ.

ಯುವ ಜನರ ಪೈಕಿ ಬಹುತೇಕರು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ‘ಫ್ರೆಂಡ್‌ಶಿಪ್‌ ಡೇ’ ಶುಭಾಶಯಗಳನ್ನು ಕೋರುವ ಜತೆಗೆ ತಮ್ಮ ಗೆಳೆತನವನ್ನು ಸಾರುವ ಹಳೆಯ ಭಾವಚಿತ್ರಗಳು, ಆತ್ಮೀಯ ಕ್ಷಣಗಳ ಬಗ್ಗೆ ಬರೆದುಕೊಂಡು ಸಂಭ್ರಮಿಸಿದರು.

‘ಶಾಲೆಯಲ್ಲಿರುವಾಗ ಪ್ರತಿ ವರ್ಷ ‘ಫ್ರೆಂಡ್‌ಶಿಪ್ ಡೇ’ ಆಚರಿಸುತ್ತಿದ್ದೆವು. ಆದರೆ ಕಾಲೇಜಿಗೆ ಬಂದ ಬಳಿಕ ಬಾಲ್ಯದ ಗೆಳತಿಯರ ಭೇಟಿ ಅಪರೂಪವಾಗಿತ್ತು. ಇವತ್ತು ಅನೇಕ ವರ್ಷಗಳ ನಂತರ ‘ಫ್ರೆಂಡ್‌ಶಿಪ್‌ ಡೇ’ ನೆಪದಲ್ಲಿ ಹಲವು ಗೆಳತಿಯರನ್ನು ಭೇಟಿ ಮಾಡಿದೆ. ಅನೇಕರು ಸೇರಿ ಸಿಟಿ ಸುತ್ತಾಡಿಕೊಂಡು, ಚಾಟ್‌ ತಿಂದು ಸಂತಸ ಪಟ್ಟೆವು’ ಎಂದು ಬಿಬಿಎ ವಿದ್ಯಾರ್ಥಿನಿ ಎಚ್.ಆರ್.ಗಾಯತ್ರಿ ಖುಷಿಪಟ್ಟು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !