ಸದ್ದಿಲ್ಲದೆ ಅಂತರ್ಜಲ ಸೇರಿದ ತ್ಯಾಜ್ಯ ನೀರು: ಬಳಕೆಗೆ ಹಿಂದೇಟು

7
ಕೆ.ಸಿ ವ್ಯಾಲಿ ಯೋಜನೆ ಅವಾಂತರ: ಕುಡಿಯಲು ಯೋಗ್ಯವಲ್ಲವೆಂದು ವರದಿ ಸಲ್ಲಿಕೆ

ಸದ್ದಿಲ್ಲದೆ ಅಂತರ್ಜಲ ಸೇರಿದ ತ್ಯಾಜ್ಯ ನೀರು: ಬಳಕೆಗೆ ಹಿಂದೇಟು

Published:
Updated:
Deccan Herald

ಕೋಲಾರ: ಕೋರಮಂಗಲ– ಚಲ್ಲಘಟ್ಟ (ಕೆ.ಸಿ ವ್ಯಾಲಿ) ಯೋಜನೆಯ ತ್ಯಾಜ್ಯ ನೀರು ತಾಲ್ಲೂಕಿನ ನರಸಾಪುರ ಭಾಗದಲ್ಲಿ ಸದ್ದಿಲ್ಲದೆ ಅಂತರ್ಜಲ ಸೇರಿದ್ದು, ಸುತ್ತಮುತ್ತಲ ಗ್ರಾಮಗಳ ಜನ ಕೊಳವೆ ಬಾವಿ ನೀರು ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಪೂರ್ಣಗೊಂಡ ನಂತರ ಜೂನ್‌ 2ರಿಂದ ಸತತ ಒಂದೂವರೆ ತಿಂಗಳು ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ನರಸಾಪುರ ಭಾಗದ ಕೆರೆಗಳಿಗೆ ಹರಿಸಲಾಗಿತ್ತು. ಜುಲೈ 18ರಂದು ನೀರಿನಲ್ಲಿ ನೊರೆ (ಬುರುಗು) ಕಾಣಿಸಿಕೊಂಡ ಕಾರಣ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಯಿತು.

ಆದರೆ, ಆ ವೇಳೆಗಾಗಲೇ ತಾಲ್ಲೂಕಿನ ಲಕ್ಷ್ಮೀಸಾಗರ, ಉದ್ದಪ್ಪನಹಳ್ಳಿ, ಜೋಡಿ ಕೃಷ್ಣಾಪುರ, ನರಸಾಪುರ ಹಾಗೂ ದೊಡ್ಡವಲ್ಲಭಿ ಕೆರೆಗಳು ಭರ್ತಿಯಾಗಿದ್ದವು. ಲಕ್ಷ್ಮೀಸಾಗರ ಕೆರೆ ನೀರಿನಲ್ಲಿ ನೊರೆ ಕಾಣಿಸಿಕೊಂಡು ನೀರು ಕಪ್ಪು ಬಣ್ಣಕ್ಕೆ ತಿರುಗಿತ್ತು. ನಂತರ ಸ್ವಲ್ಪ ದಿನಗಳಲ್ಲೇ ಕೆರೆಯಲ್ಲಿ ಜಲಚರಗಳು ಮೃತಪಟ್ಟಿದ್ದವು.

ನರಸಾಪುರ ಹಾಗೂ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ನೀರಿಗೆ ಕೆರೆಗಳ ಅಂಗಳದ ಕೊಳವೆ ಬಾವಿಗಳನ್ನೇ ಅವಲಂಬಿಸಲಾಗಿದೆ. ಪೈಪ್‌ಲೈನ್‌ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ವಿಷಕಾರಿ ಅಂಶ: ಕೆರೆ ಮತ್ತು ಕೊಳವೆ ಬಾವಿ ನೀರಿನಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಗ್ರಾಮ ಪಂಚಾಯಿತಿ ಚುನಾಯಿತ ಮಂಡಳಿ ಸದಸ್ಯರು ಇತ್ತೀಚೆಗೆ ನೀರಿನ ಮಾದರಿ ಸಂಗ್ರಹಿಸಿ ಪರಿಶೀಲನೆಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಳುಹಿಸಿಕೊಟ್ಟಿದ್ದರು. ಇಲಾಖೆ ಅಧಿಕಾರಿಗಳು ನೀರಿನ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ಮಾಡಿಸಿದಾಗ ನೀರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಫ್ಲೋರೈಡ್‌, ಕ್ಲೋರೈಡ್‌ ಹಾಗೂ ನೈಟ್ರೇಟ್‌ ಅಂಶ ಪತ್ತೆಯಾಗಿದೆ. ಜತೆಗೆ ನೀರು ಹೆಚ್ಚು ಗಡುಸುತನದಿಂದ ಕೂಡಿರುವ ಸಂಗತಿ ಗೊತ್ತಾಗಿದ್ದು, ಈ ಸಂಬಂಧ ಪ್ರಯೋಗಾಲಯ ತಜ್ಞರು ಇಲಾಖೆಗೆ ವರದಿ ನೀಡಿದ್ದಾರೆ.

ಕರಪತ್ರ ಹಂಚಿಕೆ: ತಜ್ಞರ ವರದಿ ಆಧರಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಕೆರೆ ಅಂಗಳದ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಗ್ರಾಮ ಪಂಚಾಯಿತಿಗೆ ವರದಿ ಕೊಟ್ಟಿದ್ದಾರೆ. ಹೀಗಾಗಿ ಕೊಳವೆ ಬಾವಿಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸದಂತೆ ಮತ್ತು ಜಾನುವಾರುಗಳಿಗೂ ಕುಡಿಸದಂತೆ ನರಸಾಪುರ ಗ್ರಾಮ ಪಂಚಾಯಿತಿ ವತಿಯಿಂದ ಕರಪತ್ರ ಮುದ್ರಿಸಿ ಗ್ರಾಮಗಳಲ್ಲಿ ಹಂಚಲಾಗಿದೆ.

ಈ ಭಾಗದ ಗ್ರಾಮಗಳ ಜನಸಂಖ್ಯೆಗೆ ಹೋಲಿಸಿದರೆ ಶುದ್ಧ ಕುಡಿಯುವ ನೀರಿನ ಘಟಕಗಳ ಸಂಖ್ಯೆ ಕಡಿಮೆಯಿದೆ. ಜನರ ಬೇಡಿಕೆಗೆ ತಕ್ಕಂತೆ ಶುದ್ಧ ನೀರು ಸಿಗುತ್ತಿಲ್ಲ. ಕೆರೆ ಅಂಗಳದ ಕೊಳವೆ ಬಾವಿ ನೀರು ಬಳಕೆಗೆ ಯೋಗ್ಯವಲ್ಲದ ಕಾರಣ ಹಣ ಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ.

ಅಂಕಿ ಅಂಶ.....
* ₹ 1,280 ಕೋಟಿ ಕೆ.ಸಿ ವ್ಯಾಲಿ ಯೋಜನೆಯ ಅಂದಾಜು ವೆಚ್ಚ
* ಅವಿಭಜಿತ ಕೋಲಾರ ಜಿಲ್ಲೆಯ 136 ಕೆರೆ ತುಂಬಿಸುವ ಉದ್ದೇಶ
* ಬೆಂಗಳೂರಿನಿಂದ ಜಿಲ್ಲೆಯವರೆಗೆ 55 ಕಿ.ಮೀ ಉದ್ದದ ಪೈಪ್‌ಲೈನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !