ಹೊಸತನಕ್ಕೆ ತುಡಿತ; ಪ್ರಗತಿಯತ್ತ ರೈತ

7
ಪ್ರಯೋಗಶೀಲಕ್ಕೆ ಒತ್ತು; ವೈವಿಧ್ಯಮಯ ಬೆಳೆಗಳಿಗೆ ಮನ್ನಣೆ ಸಿಕ್ತು...

ಹೊಸತನಕ್ಕೆ ತುಡಿತ; ಪ್ರಗತಿಯತ್ತ ರೈತ

Published:
Updated:
Deccan Herald

ನಿಡಗುಂದಿ: ಸೌಮ್ಯ ಸ್ವಭಾವ. ಆದರೆ ಕೃತಿಯೊಳಗೆ ಪಕ್ಕಾ ವ್ಯಾಪಾರಿ ಮನೋಭಾವ. ಆಶಾವಾದಿ. ಇದ್ದ ಜಮೀನಿನಲ್ಲಿಯೇ ಹೊಸ, ಹೊಸ ಬೆಳೆ ಬೆಳೆದು ಯಶಸ್ಸು ಕಂಡ ರೈತ...

ಪದವಿ ಪಡೆದರೂ ನೌಕರಿಗಾಗಿ ಅಲೆದಾಡಲಿಲ್ಲ ನಿಡಗುಂದಿ ಪಟ್ಟಣದ ಪ್ರಗತಿಪರ ರೈತ ಶಿವಾನಂದ ಮುರನಾಳ. ಒಂದೂವರೆ ದಶಕದಿಂದ ತಮಗೆ ಬಳುವಳಿಯಾಗಿ ಬಂದ 26 ಎಕರೆ ಜಮೀನಿನಲ್ಲಿ ನೈಸರ್ಗಿಕ ಹಾಗೂ ರಾಸಾಯನಿಕ ಎರಡೂ ಮಾದರಿಯ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆದು, ಆದಾಯ ಗಳಿಕೆ ಜತೆಗೆ ಸುತ್ತಮುತ್ತಲಿವರ ಪ್ರಶಂಸೆಗೆ ಪಾತ್ರರಾಗಿ, ಮಾದರಿಯೂ ಆಗಿದ್ದಾರೆ.

26 ಎಕರೆ ಜಮೀನಿನಲ್ಲಿ 16 ಎಕರೆ ಕಬ್ಬು, ಇನ್ನುಳಿದ 10 ಎಕರೆಯಲ್ಲಿ ಹಿಪ್ಪುನೇರಳೆ, ಸಜ್ಜೆ, ತೊಗರಿ, ಈರುಳ್ಳಿ, ದನಗಳಿಗೆ ಬೇಕಾಗುವ ಮೇವು ಬೆಳೆಸಿದ್ದಾರೆ. ಹಿಂಗಾರಿ ಬೆಳೆಯಾಗಿ ಗೋಧಿ, ಜೋಳವನ್ನು ಬೆಳೆಯುವ ಇವರು ತೆಂಗು, ಪೇರಲ, ನುಗ್ಗೆ ಮೊದಲಾದ ಗಿಡಗಳನ್ನು ಹೊಲದ ಬದುಗಳಲ್ಲಿ ಬೆಳೆಸಿದ್ದಾರೆ.

ಹೈನುಗಾರಿಕೆ:  ಹೈನುಗಾರಿಕೆಯನ್ನು ಸಣ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡಿರುವ ಶಿವಾನಂದ, ತಲಾ ಮೂರು ಆಕಳು, ಎಮ್ಮೆಗಳನ್ನು ಸಾಕಿದ್ದಾರೆ. ಇವುಗಳಿಂದ ದೊರಕುವ ಹಾಲನ್ನು ಮನೆಗೆ ಬಳಸಿ, ಉಳಿದಿದ್ದನ್ನು ಮಾರುತ್ತಾರೆ.
ಕಬ್ಬು ಬೆಳೆಗೆ ರಾಸಾಯನಿಕ ಗೊಬ್ಬರದ ಜತೆಗೆ ಹೆಚ್ಚಾಗಿ ಪಾಳೇಕರ ಮಾದರಿಯಲ್ಲಿಯೂ ಗೊಬ್ಬರ ತಯಾರಿಸಿ ಜೀವಾಮೃತವನ್ನು ಉಣಿಸುತ್ತಾರೆ. ಹೀಗಾಗಿ ಇವರ ಕಬ್ಬಿನ ಇಳುವರಿಯೂ ಹೆಚ್ಚಿದೆ. ಕಬ್ಬಿನ ಬೆಳೆಯಿಂದ ವಾರ್ಷಿಕ ₹ 20 ಲಕ್ಷ ಆದಾಯ ಇವರಿಗಿದೆ.

ರೇಷ್ಮೆ ಬೆಳೆ: ಹೊಸ ಪ್ರಯೋಗಕ್ಕೆ ಸದಾ ತಮ್ಮನ್ನು ಒಡ್ಡಿಕೊಳ್ಳುವ ಶಿವಾನಂದ, ಇದೀಗ ರೇಷ್ಮೆ ಉತ್ಪಾದನೆಯಲ್ಲೂ ತಲ್ಲೀನ. ಇದಕ್ಕಾಗಿ ದೊಡ್ಡ ಶೆಡ್‌ ನಿರ್ಮಿಸಿದ್ದು, ರೇಷ್ಮೆ ಹುಳು ಸಾಕಣೆ ನಡೆಸಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆ ಬೆಳೆದಿದ್ದಾರೆ.

ತಲಾ ಎರಡು ಎಕರೆಯಂತೆ ಎರಡು ಪ್ರತ್ಯೇಕ ಸಮಯದಲ್ಲಿ ಹಿಪ್ಪು ನೇರಳೆ ಬೆಳೆಯುತ್ತಾರೆ. ಗದಗದಿಂದ ರೇಷ್ಮೆ ಹುಳುಗಳನ್ನು ತಂದು ಶೆಡ್‌ನಲ್ಲಿ ಬೆಳೆಸಿ, ಆಹಾರವಾಗಿ ಹಿಪ್ಪು ನೇರಳೆ ಸೊಪ್ಪು ಹಾಕುತ್ತಾರೆ. 28 ದಿನದಲ್ಲಿ ರೇಷ್ಮೆ ಬೆಳೆ ಕೈಗೆ ಬರುತ್ತದೆ. ಅಷ್ಟರಲ್ಲಿ ಎರಡು ಎಕರೆಯ ಹಿಪ್ಪು ನೇರಳೆ ಖಾಲಿಯಾಗಿರುತ್ತದೆ. ಆ ರೇಷ್ಮೆ ನೂಲು ಕೊಟ್ಟ ಹುಳುಗಳನ್ನು ತೆಗೆದು, ಹೊಸ ಹುಳುಗಳನ್ನು ತಂದು ಸಾಕುತ್ತಾರೆ. ಅಲ್ಲಿಯವರೆಗೆ ಇನ್ನೆರೆಡು ಎಕರೆಯಲ್ಲಿ ಬೆಳೆದ ಹಿಪ್ಪು ನೇರಳೆ ಬಳಸುತ್ತಾರೆ.

ವರ್ಷಕ್ಕೆ 9ರಿಂದ 10 ಬಾರಿ ಈ ರೀತಿ ರೇಷ್ಮೆ ನೂಲು ಇವರಿಗೆ ದೊರೆಯುತ್ತದೆ. 28 ದಿನದ ನಂತರ ಕನಿಷ್ಠ 250 ಕೆಜಿಯಷ್ಟು ರೇಷ್ಮೆ ದೊರೆಯುತ್ತದೆ. ಎಲ್ಲಾ ಖರ್ಚು ತೆಗೆದು ವಾರ್ಷಿಕ ₹ 4 ಲಕ್ಷದವರೆಗೂ ಆದಾಯ ಬರುತ್ತದೆ ಎನ್ನುತ್ತಾರೆ ಶಿವಾನಂದ.

ಸಂಪರ್ಕ ಸಂಖ್ಯೆ: 9880731323

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !