ಜೀವ ಭಯದ ನಡುವೆ ಮಕ್ಕಳ ಆಟ–ಪಾಠ

7
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳ ಸರಮಾಲೆ

ಜೀವ ಭಯದ ನಡುವೆ ಮಕ್ಕಳ ಆಟ–ಪಾಠ

Published:
Updated:
Deccan Herald

ಕೋಲಾರ: ಮಳೆ ಬಂದರೆ ಸೋರುವ ಸೂರು... ಶಿಥಿಲಾವಸ್ಥೆಯಲ್ಲಿರುವ ಮೇಲ್ಚಾವಣಿ... ಸುಣ್ಣ ಬಣ್ಣ ಕಾಣದ ಗೋಡೆಗಳು... ಜೀವ ಭಯದ ನಡುವೆ ವಿದ್ಯಾರ್ಥಿಗಳ ಕಲಿಕೆ... ಇದು ಜಿಲ್ಲೆಯ ಬಹುಪಾಲು ಸರ್ಕಾರಿ ಶಾಲೆಗಳ ದುಸ್ಥಿತಿ.

ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳು ಒಂದೆರಡಲ್ಲ. ಶಿಕ್ಷಕರ ಕೊರತೆ, ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಕೊಠಡಿಗಳು, ಶಿಥಿಲ ಕಟ್ಟಡ, ಪೀಠೋಪಕರಣ, ತಡೆಗೋಡೆ (ಕಾಂಪೌಂಡ್‌) ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇದೆ.

ಶಾಲಾ ಕಟ್ಟಡಗಳ ಅವ್ಯವಸ್ಥೆ ಮತ್ತು ಮೂಲಸೌಕರ್ಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬವಣೆ ಪಡುವಂತಾಗಿದೆ. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಕೊಠಡಿಗಳ ಸಂಖ್ಯೆ ಕಡಿಮೆಯಿದೆ. ಅಂತಹ ಶಾಲೆಗಳಲ್ಲಿ ಮೂರ್ನಾಲ್ಕು ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಠ್ಯ ಬೋಧನೆ ಮಾಡಲಾಗುತ್ತಿದೆ.

ಮತ್ತೆ ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಾಗಿ ಮೂರ್ನಾಲ್ಕು ತರಗತಿಗಳ ವಿದ್ಯಾರ್ಥಿಗಳಿಗೆ ಒಟ್ಟಿಗೆ ಪಾಠ ಮಾಡಲಾಗುತ್ತಿದೆ. ಜತೆಗೆ ಹಾಲಿ ಶಿಕ್ಷಕರೇ ಮೂರ್ನಾಲ್ಕು ವಿಷಯಗಳನ್ನು ಬೋಧಿಸುವ ಪರಿಸ್ಥಿತಿ ಇದೆ. ಇದರಿಂದ ಶಿಕ್ಷಕರ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ.

ಬಯಲಿನಲ್ಲಿ ಪಾಠ: ಜಿಲ್ಲೆಯಲ್ಲಿ ಹಿಂದಿನ ವರ್ಷ ಸುರಿದ ಧಾರಾಕಾರ ಮಳೆಯು ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಿಸಿದೆ. ಮಳೆಗೆ ಹಲವೆಡೆ ಶಾಲಾ ಕಟ್ಟಡಗಳು ಕುಸಿದಿವೆ. ಅನೇಕ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಇದರಿಂದ ಶಿಕ್ಷಕರು ಮತ್ತು ಮಕ್ಕಳು ಶಾಲೆಯೊಳಗೆ ಹೋಗಲು ಭಯಪಡುವಂತಾಗಿದೆ.

ಸುರಕ್ಷತೆ ದೃಷ್ಟಿಯಿಂದ ತರಗತಿಗಳನ್ನು ಬೇರೆ ಕೊಠಡಿಗಳಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಕೊಠಡಿಗಳು ಇಲ್ಲದ ಕೆಲ ಶಾಲೆಗಳಲ್ಲಿ ಮಕ್ಕಳನ್ನು ಬಯಲಿನಲ್ಲಿ ಮರಗಳ ಕೆಳಗೆ ಕೂರಿಸಿ ಪಾಠ ಮಾಡಲಾಗುತ್ತಿದೆ.

ಶೌಚಾಲಯವಿಲ್ಲ: ಕೇಂದ್ರ ಸರ್ಕಾರವು ಹಿಂದಿನ ವರ್ಷ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಿ ಪ್ರಶಸ್ತಿ ನೀಡಿತ್ತು. ಆದರೆ, 525 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂಬ ಸಂಗತಿ ಪರಿಶೀಲನೆಯಿಂದ ಗೊತ್ತಾಗಿದೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಯಲಿನಲ್ಲೇ ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಇದೆ.

ಮತ್ತೆ ಕೆಲ ಶಾಲೆಗಳಲ್ಲಿ ಶೌಚಾಲಯವಿದ್ದರೂ ನೀರಿನ ಸೌಕರ್ಯವಿಲ್ಲದ ಕಾರಣ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಆ ಶಾಲೆಗಳ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಗೋಳು ಹೇಳತೀರದು.

ಅಂಕಿ ಅಂಶ

* ಜಿಲ್ಲೆಯಲ್ಲಿ 6 ಶೈಕ್ಷಣಿಕ ವಲಯಗಳಿವೆ
* 1,192 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು
* 627 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು
* 125 ಸರ್ಕಾರಿ ಪ್ರೌಢ ಶಾಲೆಗಳಿವೆ
* 228 ಸರ್ಕಾರಿ ಶಾಲೆಗಳಿಗೆ ತಡೆಗೋಡೆಯಿಲ್ಲ
* 525 ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಬೇಕಿದೆ
* ಶಾಲೆಗಳ 210 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !