‘ಶಾಸಕರಾಗಿದ್ದಾಗ ಜೆ.ಆರ್‌.ಲೋಬೊ ಏನು ಮಾಡಿದ್ದಾರೆ?’

7
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಪ್ರಶ್ನೆ

‘ಶಾಸಕರಾಗಿದ್ದಾಗ ಜೆ.ಆರ್‌.ಲೋಬೊ ಏನು ಮಾಡಿದ್ದಾರೆ?’

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಪಂಪ್‌ವೆಲ್‌ ವೃತ್ತದ ಮೇಲುಸೇತುವೆ ಕಾಮಗಾರಿ ವಿಳಂಬದ ವಿಷಯದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್‌ ವಿರುದ್ಧ ಆರೋಪ ಮಾಡುತ್ತಿರುವ ಮಾಜಿ ಶಾಸಕ ಜೆ.ಆರ್‌.ಲೋಬೊ ಶಾಸಕರಾಗಿದ್ದಾಗ ಏನು ಮಾಡಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಸಂಜೀವ ಮಠಂದೂರು ಪ್ರಶ್ನಿಸಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಈ ಕಾಮಗಾರಿಗೆ 2010ರಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿತ್ತು. ವಿನ್ಯಾಸ ಬದಲಾವಣೆಯ ನೆಪದಲ್ಲಿ ಎರಡು ವರ್ಷಗಳ ಕಾಲ ಕಾಮಗಾರಿ ಆರಂಭಿಸದಂತೆ ತಡೆಯಲಾಗಿತ್ತು. ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಲೋಬೊ ಇದಕ್ಕೆ ಕಾರಣ. ಶಾಸಕರಾದ ಬಳಿಕವೂ ಅವರು ಕಾಮಗಾರಿ ಚುರುಕುಗೊಳಿಸಲು ಯಾವುದೇ ಪ್ರಯತ್ನ ನಡೆಸಲಿಲ್ಲ’ ಎಂದು ಆರೋಪಿಸಿದರು.

2013ರಲ್ಲಿ ಪಂಪ್‌ವೆಲ್‌ ಮೇಲುಸೇತುವೆ ಕಾಮಗಾರಿ ಆರಂಭವಾಯಿತು. ಅಷ್ಟರಲ್ಲೇ ಗುತ್ತಿಗೆ ಪಡೆದ ಸಂಸ್ಥೆಯ ಪ್ರಮುಖರು ಬಂಧಿತರಾಗಿ ಜೈಲು ಸೇರಿದರು. ಆ ಬಳಿಕ ಕಂಪೆನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಇದರಿಂದ ಕಾಮಗಾರಿ ವಿಳಂಬವಾಯಿತು. ಪಂಪ್‌ವೆಲ್‌ ಮತ್ತು ಉಳ್ಳಾಲ ಮೇಲುಸೇತುವೆಗಳ ಕಾಮಗಾರಿಗಳನ್ನು ಈ ವರ್ಷದ ಡಿಸೆಂಬರ್‌ನಲ್ಲೇ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಉಡುಪಿಯಲ್ಲಿ ಐದು ಮೇಲುಸೇತುವೆಗಳ ಕಾಮಗಾರಿ ಬಾಕಿ ಇದೆ. ಆದರೆ, ದಕ್ಷಿಣ ಕನ್ನಡದಲ್ಲಿ ಸಂಸದರ ಒತ್ತಡದಿಂದ ಕೆಲಸಕ್ಕೆ ವೇಗ ದೊರೆತಿದೆ ಎಂದರು.

ನಕಲಿ ಖಾತೆಯಲ್ಲಿ ಅಪಪ್ರಚಾರ:

‘ನಳಿನ್‌ಕುಮಾರ್ ಕಟೀಲ್‌ ಸಂಸದರಾಗಿ 2014–15ರಿಂದ ಈವರೆಗೆ ₹ 15,145 ಕೋಟಿ ಮೊತ್ತದ ಅನುದಾನವನ್ನು ಜಿಲ್ಲೆಗೆ ತಂದಿದ್ದಾರೆ. ಅವರ ಜನಪ್ರಿಯತೆಯನ್ನು ಸಹಿಸದವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು, ಅಪಪ್ರಚಾರಕ್ಕೆ ಇಳಿದಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸುವುದಕ್ಕಾಗಿ ಸಂಸದರು ₹ 4,367 ಕೋಟಿ ಅನುದಾನ ತಂದಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಜನಬೆಂಬಲ ದೊರೆಯುವುದು ನಿಶ್ಚಿತ. ಇದರಿಂದ ಕಂಗೆಟ್ಟಿರುವ ವಿರೋಧ ಪಕ್ಷಗಳ ಸದಸ್ಯರು ಇಂತಹ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

ನಳಿನ್‌ಕುಮಾರ್ ಕಟೀಲ್ ಜನಸಾಮಾನ್ಯರ ಸಂಸದ. ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪಗಳಿಲ್ಲದೇ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ ಜಿಲ್ಲೆಯ ಜನರು ನಂಬುವುದಿಲ್ಲ ಎಂದು ಹೇಳಿದರು.

ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಪ್ರತಾಪ್‌ ಸಿಂಹ ನಾಯಕ್‌, ಮುಖಂಡರಾದ ಕಿಶೋರ್ ರೈ, ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿತೇಂದ್ರ ಕೊಟ್ಟಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !