ಗಣಿ ಪ್ರದೇಶದ ಜನರಲ್ಲಿ ಶ್ವಾಸಕೋಶದ ಸಮಸ್ಯೆ

7
ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಎಸ್‌ಡಿಯುಎಎಚ್‌ಇಆರ್‌ ಕುಲಪತಿ ರಘುವೀರ್ ಹೇಳಿಕೆ

ಗಣಿ ಪ್ರದೇಶದ ಜನರಲ್ಲಿ ಶ್ವಾಸಕೋಶದ ಸಮಸ್ಯೆ

Published:
Updated:
Deccan Herald

ಕೋಲಾರ: ‘ಜಿಲ್ಲೆಯ ಕೆಜಿಎಫ್ ಹಾಗೂ ಸುತ್ತಮುತ್ತಲ ಗಣಿ ಪ್ರದೇಶದ ಜನರಲ್ಲಿ ಶ್ವಾಸಕೋಶದ ಸಮಸ್ಯೆ ಹೆಚ್ಚಿದೆ. ಈ ಬಗ್ಗೆ ವೈದ್ಯಕೀಯ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ (ಎಸ್‌ಡಿಯುಎಎಚ್‌ಇಆರ್‌) ಕುಲಪತಿ ಡಾ.ಸಿ.ವಿ.ರಘುವೀರ್ ಹೇಳಿದರು.

ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕಾಗ್ನಿಟಿವ್ ನರವಿಜ್ಞಾನ ಮತ್ತು ಅದರ ಬದಲಾವಣೆ’ ಕುರಿತ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಚಿನ್ನದ ಗಣಿ ಹಾಗೂ ಸೈನೈಡ್‌ ದಿಬ್ಬಗಳ ದೂಳು ಜನರ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರಿದ್ದು, ಉಸಿರಾಟ ಸಮಸ್ಯೆ ಸಾಮಾನ್ಯವಾಗಿದೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ವೈದ್ಯರು ಮೂಲ ವೈದ್ಯಕೀಯ ವಿಜ್ಞಾನದ ಅಧ್ಯಯನಕ್ಕೆ ಆಸಕ್ತಿ ತೋರುತ್ತಿಲ್ಲ. ಶರೀರಶಾಸ್ತ್ರ, ಜೀವ ರಸಾಯನಶಾಸ್ತ್ರ, ಅಂಗ ರಚನಾಶಾಸ್ತ್ರ ಕೋರ್ಸ್‌ಗಳಿಗೆ ಭವಿಷ್ಯವಿಲ್ಲ ಎಂಬ ನಿಲುವು ಸರಿಯಲ್ಲ. ಹೆಚ್ಚಿನ ಬೇಡಿಕೆ ಇರುವ ನರರೋಗ ಶಾಸ್ತ್ರದ ಅಧ್ಯಯನಕ್ಕೆ ತಳಹದಿ ಆಗಿರುವ ಶರೀರಶಾಸ್ತ್ರ, ಜೀವ ರಸಾಯನಶಾಸ್ತ್ರ, ಅಂಗ ರಚನಾಶಾಸ್ತ್ರದ ಅಧ್ಯಯನವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅತ್ಯಗತ್ಯ’ ಎಂದು ಸಲಹೆ ನೀಡಿದರು.

ಹಣ ಮುಖ್ಯವಲ್ಲ: ‘ಭವಿಷ್ಯದಲ್ಲಿ ನರರೋಗ ಶಾಸ್ತ್ರದ ಅಧ್ಯಯನಕ್ಕೆ ಮೂಲ ವೈದ್ಯಕೀಯ ವಿಜ್ಞಾನದ ಕಲಿಕೆ ಅಗತ್ಯವೆಂಬ ಕಾನೂನು ಜಾರಿಗೊಳಿಸಬೇಕು. ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದನೆಯೇ ಮುಖ್ಯವಲ್ಲ. ಬದಲಿಗೆ ರೋಗಿಗಳಿಗೆ ಸೇವೆ ನೀಡುವುದು ಮುಖ್ಯ. ಕೆಜಿಎಫ್ ಗಣಿ ದೂಳಿನಿಂದ ಆಗಿರುವ ಸ್ಥಳೀಯರ ಆರೋಗ್ಯ ಸಮಸ್ಯೆಗೆ ಸಮಗ್ರ ಚಿಕಿತ್ಸೆ ನೀಡುವ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆಯಬೇಕು’ ಎಂದು ಹೇಳಿದರು.

ಅಧ್ಯಯನಕ್ಕೆ ಪೂರಕ: ‘ಹೃದಯಾಘಾತ, ಅಪಘಾತ, ತೀವ್ರ ನಿಗಾ ಘಟಕ, ಸುಟ್ಟ ಗಾಯ ಚಿಕಿತ್ಸೆ ಬಗ್ಗೆ ಬೂಟ್ಸ್ವಾನಾ ದೇಶದ ವೈದರ ತಂಡಕ್ಕೆ ವಿಶೇಷ ತರಬೇತಿ ನೀಡಿ ಜಿಲ್ಲೆಯ ವೈದ್ಯಕೀಯ ಸೇವೆ ಸಾಗರದಾಚೆಗೂ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿನ ಮೂಲ ಸೌಲಭ್ಯ ಮತ್ತು ಹೈಟೆಕ್ ಚಿಕಿತ್ಸೆಯು ವಿದೇಶಿ ವೈದ್ಯರ ಅಧ್ಯಯನಕ್ಕೆ ಪೂರಕವಾಗಿದೆ’ ಎಂದು ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಕುಲಸಚಿವ ಡಾ.ಎ.ವಿ.ಎಂ.ಕುಟ್ಟಿ ವಿವರಿಸಿದರು.

‘ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಯಾಟಲೈಟ್‌ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಗ್ರಾಮಾಂತರ ಭಾಗದ ಜನರಿಗೆ ಮನೆ ಬಾಗಿಲಲ್ಲೇ ವೈದ್ಯಕೀಯ ಸೇವೆ ನೀಡಲು ಮೊಬೈಲ್ ಕ್ಲಿನಿಕ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ವಿ.ಲಕ್ಷ್ಮಯ್ಯ ಮಾಹಿತಿ ನೀಡಿದರು.

ಪ್ರಬಂಧ ಮಂಡನೆ: ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ ವೈದ್ಯಕೀಯ ಕಾಲೇಜುಗಳ 200ಕ್ಕೂ ಹೆಚ್ಚು ತಜ್ಞರು ಸಮ್ಮೇಳನದಲ್ಲಿ ನರ ವಿಜ್ಞಾನ ಕುರಿತು ಪ್ರಬಂಧ ಮಂಡಿಸಿದರು. ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಕುಲಪತಿ ಡಾ.ಎಸ್.ಕುಮಾರ್, ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರ ಕುಮಾರ್‌, ಉಪಪ್ರಾಂಶುಪಾಲ ಡಾ.ಎ.ಭಾಸ್ಕರನ್, ವೈದ್ಯರಾದ ಡಾ.ಮಾತಂಗಿ, ಡಾ.ಎಂ.ವಿ.ಶೋಭಾ, ಡಾ.ಗೋವಂದರಾಜ್‌ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !