ನಗರದಲ್ಲೆಡೆ ಊರ ಹಬ್ಬದ ಸಂಭ್ರಮ

7
ಅಲಂಕೃತ ತಂಬಿಟ್ಟಿನ ಆರತಿ ಹೊತ್ತು ಮೆರವಣಿಗೆಯಲ್ಲಿ ಸಾಗಿದ ಮಹಿಳೆಯರು

ನಗರದಲ್ಲೆಡೆ ಊರ ಹಬ್ಬದ ಸಂಭ್ರಮ

Published:
Updated:
Deccan Herald

ಚಿಕ್ಕಬಳ್ಳಾಪುರ: ನಗರದ ವಿವಿಧೆಡೆ ಕಳೆದ ಮೂರು ದಿನಗಳಿಂದ ಊರ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದ್ದು, ನಗರದಲ್ಲೆಡೆ ತಮಟೆ ಸದ್ದು ಅನುರಣಿಸುತ್ತಿದೆ.

ನಗರದ ಪ್ರಮುಖ ರಸ್ತೆಗಳಾದ ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ಗಂಗಮ್ಮನಗುಡಿ ರಸ್ತೆಯಲ್ಲಿ ಕೆಲ ಸಮಿತಿಗಳು ವಿವಿಧ ದೇವತೆಗಳ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಜಾತ್ರಾ ಮಹೋತ್ಸವ ಹಮ್ಮಿಕೊಂಡಿವೆ. ರಸ್ತೆಗಳನ್ನು ವಿವಿಧ ಬಣ್ಣದ ವಿದ್ಯುತ್ ದೀಪಗಳು, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ಕೆಲವೆಡೆ ಸ್ವಾಗತ ಕಮಾನು ಸಹ ಅಳವಡಿಸಲಾಗಿದೆ.

ಬಿ.ಬಿ.ರಸ್ತೆಯಲ್ಲಿ ಸರ್ಕಲ್ ಮಾರಮ್ಮ ಸೇವಾ ಸಮಿತಿ ಸರ್ಕಲ್ ಮಾರಮ್ಮ ಉತ್ಸವ ಏರ್ಪಡಿಸಿದರೆ, ಮತ್ತೊಂದು ಸಮಿತಿ ಎಂ.ಜಿ.ರಸ್ತೆಯಲ್ಲಿ ಅಣ್ಣಮ್ಮ ದೇವಿ ಜಾತ್ರೆ ಆಯೋಜಿಸಿದೆ. ಇದೇ ರೀತಿ ಗಂಗಮ್ಮನಗುಡಿ ರಸ್ತೆಯಲ್ಲಿ ಗಂಗಮ್ಮ, ಸಪ್ಪಲಮ್ಮ, ಬಂಡಿಮಹಾಕಾಳಮ್ಮ ದೇವಿ ಜಾತ್ರೆ ಸಡಗರದಿಂದ ಆಯೋಜಿಸಲಾಗಿದೆ.

ಕಳೆದ ಮೂರು ದಿನಗಳಿಂದ ನಗರದಲ್ಲಿ ಮಹಿಳೆಯರು ತಂಬಿಟ್ಟಿನ ಅಲಂಕೃತ ಕಲಶವನ್ನು ತಲೆ ಮೇಲೆ ಹೊತ್ತು ವಿವಿಧ ವಾದ್ಯ ತಂಡಗಳೊಡನೆ ಮೆರವಣಿಗೆಯಲ್ಲಿ ಸಾಗಿ ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ.

ಬಿ.ಬಿ.ರಸ್ತೆಯ ಸರ್ಕಲ್ ಮಾರಮ್ಮ ಉತ್ಸವದ ಅಂಗವಾಗಿ ಮಂಗಳವಾರ ಜಾಲಾರಿ ಗಂಗಮ್ಮ, ಸಪ್ಪಲಮ್ಮ, ಮುತ್ಯಾಲಮ್ಮ, ಪಟಾಲಮ್ಮ ದೇವತೆಗಳ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಬಿ.ಬಿ.ರಸ್ತೆಯಲ್ಲಿರುವ ಉತ್ಸವ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಗಳಿಗೆ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಭಕ್ತರು ಬಂದು ಪೂಜೆ ಸಲ್ಲಿಸಿದರು. ವಿವಿಧ ಬಡಾವಣೆಯಲ್ಲಿ ತಲೆ ಎತ್ತಿರುವ ಉತ್ಸವ ಮಂಟಪದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಮತ್ತು ಸಂಗಿತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !