ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ

7
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹೇಳಿಕೆ

ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ

Published:
Updated:
Deccan Herald

ಕೋಲಾರ: ‘ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಸಚಿವಗಾದಿ ಕೈತಪ್ಪಿತು. ಈಗ ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ’ ಎಂದು ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸದ್ಯದಲ್ಲೇ 30 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಪಟ್ಟಿ ಘೋಷಣೆಯಾಗಲಿದೆ. ಈ ಪೈಕಿ ಕಾಂಗ್ರೆಸ್‌ಗೆ 20 ಹಾಗೂ ಜೆಡಿಎಸ್‌ಗೆ 10 ಸ್ಥಾನ ದೊರೆಯಲಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿರುವ ಕಾರಣ ಹೊಂದಾಣಿಕೆ ಅನಿವಾರ್ಯ’ ಎಂದರು.

‘ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿರುವ ನಾನು ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣ ಬೈರೇಗೌಡರು ನೇಮಕವಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವರೇ ಧ್ವಜಾರೋಹಣ ಮಾಡುತ್ತಾರೆ’ ಎಂದು ಹೇಳಿದರು.

‘ಕೃಷ್ಣ ಬೈರೇಗೌಡರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿರುವುದರಿಂದ ಅವರಿಗೆ ತವರು ಜಿಲ್ಲೆ ಕಡೆ ಗಮನ ಹರಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಜನ ಅವರ ಬಗ್ಗೆ ತಪ್ಪು ತಿಳಿಯಬೇಕಿಲ್ಲ. ಅವರು ಮುಂದಿನ ವಾರ ಕೆಡಿಪಿ ಸಭೆ ನಡೆಸುತ್ತಾರೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಅವರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಅವರಿಗೂ ತವರು ಜಿಲ್ಲೆ ಅಭಿವೃದ್ಧಿಪಡಿಸುವ ಕಾಳಜಿಯಿದೆ’ ಎಂದು ಸ್ಪಷ್ಟಪಡಿಸಿದರು.

ವೈಭವೀಕರಿಸಬಾರದು: ‘ಯರಗೋಳ್ ಯೋಜನೆ ಕಾಮಗಾರಿಯನ್ನು 8 ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರ ಮೇಲೆ ಒತ್ತಡ ಹೇರಲಾಗುತ್ತಿದೆ. ಕೆ.ಸಿ ವ್ಯಾಲಿ ಯೋಜನೆ ಬಗ್ಗೆ ಕೆಲವರು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುವಾಗ ಸಣ್ಣಪುಟ್ಟ ಲೋಪಗಳಾಗುತ್ತವೆ. ಆದರೆ, ಅದನ್ನೇ ವೈಭವೀಕರಿಸಬಾರದು. ಯೋಜನೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಸರ್ಕಾರ ಪರಿಹಾರಕ್ಕೆ ಮುಂದಾಗಿದೆ’ ಎಂದು ಹೇಳಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ ಹರಿಸಿದರೆ ಕುಡಿಯಲು ಯೋಗ್ಯವಾಗುತ್ತದೆ. ಅಂತರ್ಜಲ ವೃದ್ಧಿಗಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಯೋಜನೆ ವ್ಯಾಪ್ತಿಯ ಕೆರೆಗಳ ಸುತ್ತಮುತ್ತಲಿನ ಕೊಳವೆ ಬಾವಿಗಳ ನೀರನ್ನು ಉಪಯೋಗಿಸದಂತೆ ಕರಪತ್ರ ಹೊರಡಿಸಿರುವುದು ಅವೈಜ್ಞಾನಿಕ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನವಿ ಮಾಡುತ್ತೇವೆ: ‘ಲೋಪದೋಷದ ಕಾರಣಕ್ಕೆ ಕೆ.ಸಿ ವ್ಯಾಲಿ ಯೋಜನೆಯ ನೀರು ಹರಿಸದಂತೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ನೀರಿನ ಶುದ್ಧತೆ ಸಂಬಂಧ ಪ್ರಯೋಗಾಲಯದ ವರದಿ ಬಂದ ಮೇಲೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ತಡೆಯಾಜ್ಞೆ ತೆರವಿಗೆ ಮನವಿ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !