ರೈತ ಹುತಾತ್ಮರ ಬಲಿದಾನದ ಸ್ಮರಣೆ

7

ರೈತ ಹುತಾತ್ಮರ ಬಲಿದಾನದ ಸ್ಮರಣೆ

Published:
Updated:
Deccan Herald

ಬಾಗೇಪಲ್ಲಿ: ನವಲಗುಂದ ಹಾಗೂ ನರಗುಂದದಲ್ಲಿ 1980ರಲ್ಲಿ ನಡೆದ ರೈತರ ಹೋರಾಟಕ್ಕೆ ಬೆಂಬಲಿಸಿ ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಗೋಲಿಬಾರ್‌ಗೆ ಬಲಿಯಾದ ರೈತರ ಸ್ತೂಪಕ್ಕೆ ಮಂಗಳವಾರ ಸಿಪಿಎಂ ಕಾರ್ಯಕರ್ತರು, ಮುಖಂಡರು ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಪಿ.ಮಂಜುನಾಥರೆಡ್ಡಿ, ‘1980ರಲ್ಲಿ ಗುಂಡೂರಾವ್‌ ಅವರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನರಗುಂದ ಹಾಗೂ ನವಲಗುಂದಲ್ಲಿ ರೈತರು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಆ ಹೋರಾಟವನ್ನು ಬೆಂಬಲಿಸಿ ಬಾಗೇಪಲ್ಲಿಯಲ್ಲಿ ಸಹ ರೈತ ಮುಖಂಡ ಅಪ್ಪಸ್ವಾಮಿರೆಡ್ಡಿ ನೇತೃತ್ವದಲ್ಲಿ ರೈತರು ಹೋರಾಟ ಆರಂಭಿಸಿದ್ದರು’ ಎಂದು ಹೇಳಿದರು.

‘ಹೋರಾಟವನ್ನು ಹತ್ತಿಕ್ಕಲು ಪೊಲೀಸರು ರೈತರ ಮೇಲೆ ಮಾಡಿದ ಗೋಲಿಬಾರ್‌ನಲ್ಲಿ ರೈತರಾದ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಎಂಬುವರು ಹುತಾತ್ಮರಾದರು. ಆ ಕರಾಳ ಘಟನೆ ಜರುಗಿ ಇಂದಿಗೆ 38 ವರ್ಷಗಳು ಕಳೆದಿದೆ. ರೈತರ ಬಲಿದಾನವನ್ನು ಪ್ರತಿಯೊಬ್ಬರೂ ನೆನೆಯಬೇಕಿದೆ’ ಎಂದು ತಿಳಿಸಿದರು.

‘ಕೃಷಿ, ಕೂಲಿ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಗುಲಾಮರಂತೆ ವರ್ತಿಸುತ್ತಿರುವ ಸರ್ಕಾರಗಳ ಕ್ರಮ ಖಂಡಿಸಿ ರೈತರು ಆಗಸ್ಟ್ 9 ರಂದು ಜೈಲ್ ಭರೋ ಹಾಗೂ ಸೆಪ್ಟಂಬರ್ 5 ರಂದು ಪಾರ್ಲಿಮೆಂಟ್ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಿಪಿಎಂ ಪಟ್ಟಣ ಸಮಿತಿ ಕಾರ್ಯದರ್ಶಿ ಅಶ್ವತ್ಥಪ್ಪ ಮಾತನಾಡಿ, ‘ತಮ್ಮ ಹಕ್ಕುಗಳಿಗಾಗಿ ನ್ಯಾಯಯುತ ಹೋರಾಟ ಮಾಡಿದ ಅಮಾಯಕ ರೈತರ ಮೇಲೆ ಪೊಲೀಸರು ಗೋಲಿಬಾರ್ ಮಾಡಿರುವುದು ಖಂಡನೀಯ. ರೈತರ ಪರ ಧ್ವನಿ ಎತ್ತಿ ಹುತಾತ್ಮರಾದ ರೈತರ ಆದರ್ಶಗಳನ್ನು ಇಂದಿನ ಹೋರಾಟಗಾರರು ರೂಢಿಸಿಕೊಂಡು, ಮುಂದಿನ ಹೋರಾಟಗಳಿಗೆ ನಾಂದಿ ಹಾಡಬೇಕಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮನಾಯಕ್, ಪುರಸಭಾ ಸದಸ್ಯರಾದ ಪಿ.ಒಬಳರಾಜು, ಬಿ.ಎಚ್.ಆರೀಫ್, ಮಹಮದ್ ಅಕ್ರಂ, ಸಿಪಿಎಂ ಮುಖಂಡರಾದ ಜಿ.ಎಂ.ರಾಮಕೃಷ್ಣಪ್ಪ, ಹೇಮಚಂದ್ರ, ರವಿ, ಬಿ.ಎಚ್.ರಫೀಕ್, ಮರ್ಗಾನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ, ಕಂಚುಕೋಟೆಮೂರ್ತಿ, ಪಿ.ಎಸ್.ರಮೇಶ್, ಜೈನಾಭೀ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !