ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಬದ್ಧ

7
ಆ.11ರಂದು ಶ್ರೀರಂಗಪಟ್ಟಣದಲ್ಲಿ ಜನಪ್ರತಿನಿಧಿಗಳ ಜೊತೆ ಸಿಎಂ ಸಭೆ: ಸಿ.ಎಸ್‌.ಪುಟ್ಟರಾಜು

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಬದ್ಧ

Published:
Updated:
Deccan Herald

ಮಂಡ್ಯ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆ.11ರಂದು ಶ್ರೀರಂಗಪಟ್ಟಣದಲ್ಲಿ ಎಲ್ಲಾ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

‘ಮಂಡ್ಯ ನಗರ ಸೇರಿ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ವಹಿಸಿದ್ದಾರೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಳೆದ 20 ವರ್ಷಗಳಿಂದ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ನಗರ ವ್ಯಾಪ್ತಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಾಣ , ನಗರಕ್ಕೆ ಹೊರವರ್ತುಲ ರಸ್ತೆ, ರೈಲ್ವೆ ಮೇಲ್ಸೇತುವೆ ನಿರ್ಮಾಣ, ತರಕಾರಿ ಮಾರುಕಟ್ಟೆ ಸಮುಚ್ಛಯ ನಿರ್ಮಾಣ, ಆಸ್ಪತ್ರೆ ಆಧುನೀಕರಣ, ಪ್ರತ್ಯೇಕ ಹೆರಿಗೆ ಆಸ್ಪತ್ರೆ ನಿರ್ಮಾಣ, ಮಂಡ್ಯದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಗ್ರಾಮೀಣ ಭಾಗದ ಜನರಿಗೆ ಮೂಲ ಸೌಲಭ್ಯ ಒದಗಿಸಲಾಗುವುದು’ ಎಂದು ಹೇಳಿದರು.

‘ಗ್ರಾಮೀಣ ಭಾಗದ ಯುವಜನರಿಗೆ ಉದ್ಯೋಗ ಸೌಲಭ್ಯ ಕಲ್ಪಿಸಲು ಕೈಗಾರಿಕೆ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಈ ಬಗ್ಗೆ ಅವರು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಅವರು ಹೇಳಿದ್ದಾರೆ. ಸಿದ್ಧ ಉಡುಪು ತಯಾರಿಕೆ ಕಾರ್ಖಾನೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗುವುದು. ಜಿಲ್ಲೆಯ ಸಮಗ್ರ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ತುಂಬಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಹೇಳಿದರು.

‘ಮೈಷುಗರ್‌ ಕಾರ್ಖಾನೆ ಹಾಗೂ ಪಿಎಸ್‌ಎಸ್‌ಕೆ ಶೀಘ್ರ ಆರಂಭಗೊಳ್ಳಲಿವೆ. ಈ ಎರಡು ಕಾರ್ಖಾನೆಗಳು ಆರಂಭವಾದರೆ ರೈತರು ಬಹುತೇಕ ಸಮಸ್ಯೆಗಳು ಇತ್ಯರ್ಥಗೊಳ್ಳುತ್ತವೆ. ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಶೀಘ್ರ ಕಾರ್ಖಾನೆ ಚಕ್ರಗಳು ತಿರುಗಲಿವೆ. ಪಿಎಸ್‌ಎಸ್‌ಕೆ ಬಿಳಿಆನೆಯಾಗಿದ್ದು  ₹ 350 ಕೋಟಿ ಸಾಲ ಕಂಡು ಬಂದಿದೆ. ಈ ಎರಡು ಕಾರ್ಖಾನೆಗಳ ಪುನಾರಂಭ ಅಥವಾ ಹೊಸ ಕಾರ್ಖಾನೆ ಸ್ಥಾಪನೆ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿವೆ’ ಎಂದರು.

‘ರೈತರು ಮಾಡಿರುವ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ಗಳು ನೋಟಿಸ್‌ ನೀಡಿರುವ ಬಗ್ಗೆ ದೂರುಗಳು ಬಂದಿವೆ. ರೈತರನ್ನು ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಮುಖಂಡರಾದ ಅಶೋಕ್‌ ಜಯರಾಂ, ಬೇಲೂರು ಶಶಿಧರ್, ತಿಮ್ಮೇಗೌಡ ಇದ್ದರು.

ಚುನಾವಣೆ: ಕಾಂಗ್ರೆಸ್‌ ಜೊತೆ ಹೊಂದಾಣಿಕೆ

‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮುಂದುವರಿಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು ಸ್ಥಳೀಯ ಸಂಸ್ಥೆ ಮಟ್ಟದಲ್ಲೂ ಮೈತ್ರಿ ಮುಂದುವರಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಪಕ್ಷದ ಮುಖಂಡರು ನಿರ್ಧಾರ ಪ್ರಕಟಿಸುತ್ತಾರೆ. ಪಕ್ಷದ ನಿರ್ಧಾರದಂತೆ ಕಾರ್ಯಕರ್ತರು, ಮುಖಂಡರು ಚುನಾವಣಾ ಕೆಲಸದಲ್ಲಿ ತೊಡಗಲಿದ್ದಾರೆ’ ಎಂದು ಸಿ.ಎಸ್‌.ಪುಟ್ಟರಾಜು ಹೇಳಿದರು.

ಲೋಕಸಭೆ: ದೇವೇಗೌಡರಿಗೆ ಆಹ್ವಾನ

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗುವಂತೆ ನಮ್ಮ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರಿಗೆ ಆಹ್ವಾನ ನೀಡಲಾಗಿದೆ. ಸ್ಪರ್ಧೆ ಮಾಡುವಂತೆ ನಾನು ವೈಯಕ್ತಿಕವಾಗಿಯೂ ಮನವಿ ಮಾಡಿದ್ದೇನೆ. ಅವರು ಅಭ್ಯರ್ಥಿಯಾದರೆ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಜೆಡಿಎಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವು ನಿಶ್ಚಿತ’ ಎಂದು ಪುಟ್ಟರಾಜು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !