18 ಲಾರಿ ಮರಳು ವಶ; 32 ಟೆಂಟ್‌ಗಳ ನಾಶ

7
ನಿಷೇಧದ ನಡುವೆಅಡ್ಯಾರ್‌ ಬಳಿ ಅಕ್ರಮ ಮರಳುಗಾರಿಕೆ

18 ಲಾರಿ ಮರಳು ವಶ; 32 ಟೆಂಟ್‌ಗಳ ನಾಶ

Published:
Updated:
Deccan Herald

ಮಂಗಳೂರು: ಜಿಲ್ಲಾಡಳಿತದ ನಿಷೇಧದ ನಡುವೆಯೇ ಅಡ್ಯಾರ್ ಬಳಿ ಯಾಂತ್ರೀಕೃತ ದೋಣಿಗಳನ್ನು ಬಳಸಿ ಭಾರಿ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 18 ಲಾರಿಗಳಷ್ಟು ಮರಳನ್ನು ವಶಪಡಿಸಿಕೊಂಡಿದ್ದು, ಮರಳುಗಾರಿಕೆ ನಡೆಸುತ್ತಿದ್ದವರು ನೆಲೆಸಿದ್ದ 32 ಟೆಂಟ್‌ಗಳನ್ನು ನಾಶ ಮಾಡಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಸುಮಿತ್ರಾ, ಭೂ ವಿಜ್ಞಾನಿ ನರಸಿಂಹಮೂರ್ತಿ ಮತ್ತು ತಂಡ ಖಚಿತ ಮಾಹಿತಿ ಆಧರಿಸಿ ಅಡ್ಯಾರ್‌ನ ನೇತ್ರಾವತಿ ನದಿ ತೀರದ ಮರಳುಗಾರಿಕೆ ಪ್ರದೇಶಕ್ಕೆ ಸೋಮವಾರ ಸಂಜೆ ದಿಢೀರ್ ದಾಳಿ ನಡೆಸಿತು. ಆಗ ಅಲ್ಲಿನ 15ರಿಂದ 20 ಯಾಂತ್ರೀಕೃತ ದೋಣಿಗಳನ್ನು ಬಳಸಿ ಮರಳು ತೆಗೆಯುತ್ತಿರುವುದು ಪತ್ತೆಯಾಗಿದೆ. ಅಧಿಕಾರಿಗಳ ದಂಡವನ್ನು ನೋಡುತ್ತಿದ್ದಂತೆಯೇ ಮರಳು ತೆಗೆಯುತ್ತಿದ್ದವರು ದೋಣಿಗಳಲ್ಲಿ ನದಿಯ ಇನ್ನೊಂದು ದಡ ತಲುಪಿ, ಪರಾರಿಯಾಗಿದ್ದಾರೆ.

ನದಿಯ ಈಚೆ ದಡದಲ್ಲಿ ರಾಶಿ ಹಾಕಿದ್ದ ಸುಮಾರು 18 ಲಾರಿಗಳಷ್ಟು ಮರಳನ್ನು ಸೋಮವಾರವೇ ವಶಪಡಿಸಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಈ ಮರಳನ್ನು ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರಿಸಲಾಗಿದೆ.

ಟೆಂಟ್‌ ನಾಶ:  ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ ನೇತೃತ್ವದಲ್ಲಿ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬುಧವಾರ ಜಂಟಿಯಾಗಿ ಸ್ಥಳ ತಪಾಸಣೆ ನಡೆಸಿದರು. ಮರಳು ತೆಗೆಯುತ್ತಿದ್ದ ಸ್ಥಳದ ಸಮೀಪದಲ್ಲಿ ಪಟ್ಟಾ ಜಮೀನು ಒಂದರಲ್ಲಿ ಮರಗಳ ನಡುವೆ ಕಾರ್ಮಿಕರ ವಾಸಕ್ಕಾಗಿ 32 ಟೆಂಟ್‌ಗಳನ್ನು ನಿರ್ಮಿಸಿರುವುದು ಪತ್ತೆಯಾಗಿದೆ.

‘ಜೆಸಿಬಿಗಳ ಸಹಾಯದಿಂದ ಎಲ್ಲ ಟೆಂಟ್‌ಗಳನ್ನು ನಾಶ ಮಾಡಲಾಗಿದೆ. ಸ್ಥಳದಲ್ಲಿದ್ದ ಕಾರ್ಮಿಕರ ವಸ್ತುಗಳು ಮತ್ತು ಮರಳು ತೆಗೆಯಲು ಬಳಸುತ್ತಿದ್ದ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ದೋಣಿಗಳೊಂದಿಗೆ ಪರಾರಿಯಾಗಿರುವುದರಿಂದ ಅಕ್ರಮ ಚಟುವಟಿಕೆಯಲ್ಲಿ ಪತ್ತೆಯಾಗಿರುವವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ’ ಎಂದು ಸುಮಿತ್ರಾ ತಿಳಿಸಿದರು.

ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ವಾಸವಿರಲು ಸ್ಥಳಾವಕಾಶ ಕಲ್ಪಿಸಿದ್ದ ಜಮೀನು ಮಾಲೀಕರು ಮತ್ತು ಅವರಿಂದ ಜಾಗವನ್ನು ಗುತ್ತಿಗೆ ಪಡೆದಿರುವ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. ಆ ಬಳಿಕ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರ ಪತ್ತೆ ಸಾಧ್ಯವಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !