ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ: ಡಿ.ಸಿ ಎಚ್ಚರಿಕೆ

7
ಲೋಕಸಭಾ ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ

ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ: ಡಿ.ಸಿ ಎಚ್ಚರಿಕೆ

Published:
Updated:
Deccan Herald

ಕೋಲಾರ: ‘ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಜರುಗಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬೂತ್‌ ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಇಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಹಶೀಲ್ದಾರ್‌ಗಳು ಬೂತ್ ಮಟ್ಟದ ಅಧಿಕಾರಿಗಳಿಂದ (ಬಿಎಲ್‌ಒ) ಸಮಗ್ರ ಮಾಹಿತಿ ಪಡೆದು ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಈಗಾಗಲೇ 18 ವರ್ಷ ತುಂಬಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇಚ್ಛಿಸುವವರು ಫಾರಂ- 6ನ್ನು ಭರ್ತಿ ಮಾಡಿ ಬಿಎಲ್‍ಒ ಅಥವಾ ತಹಶೀಲ್ದಾರ್‌ಗಳಿಗೆ ಸಲ್ಲಿಸಬೇಕು. ಮತದಾರರ ಮೃತಪಟ್ಟಿದ್ದರೆ ಅಥವಾ ಬೇರೆಡೆಗೆ ವರ್ಗಾವಣೆಯಾಗಿದ್ದರೆ ಹೆಸರು ಸೇರಿಸಲು ಅಥವಾ ತೆಗೆಸಲು ಫಾರಂ 7ನ್ನು ಭರ್ತಿ ಮಾಡಿ ನೀಡಬೇಕು’ ಎಂದು ಹೇಳಿದರು.

‘ಮತದಾರರ ವಿವರದಲ್ಲಿ ತಿದ್ದುಪಡಿಗಳಿದ್ದರೆ ಫಾರಂ 8ರ ಮೂಲಕ ಅರ್ಜಿ ಸಲ್ಲಿಸಬೇಕು. ಒಂದೇ ವಿಧಾನಸಭಾ ಕ್ಷೇತ್ರದಲ್ಲಿದ್ದು, ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ವಿಳಾಸ ಬದಲಾಗಿದ್ದರೆ ಫಾರಂ 18ನ್ನು ಭರ್ತಿ ಮಾಡಿ ನೀಡಬೇಕು. ಈ ಎಲ್ಲಾ ಪ್ರಕ್ರಿಯೆಗೆ ಅ.10ರವರೆಗೆ ಕಾಲಾವಕಾಶ ನೀಡಲಾಗಿದೆ’ ಎಂದು ವಿವರಿಸಿದರು.

ಮಾಹಿತಿ ಬಂದಿಲ್ಲ: ‘ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವ ವಿಧಾನಸಭಾ ಕ್ಷೇತ್ರದಿಂದಲೂ ಸಮರ್ಪಕ ಮಾಹಿತಿ ಬಂದಿಲ್ಲ. ಬಿಎಲ್‌ಒಗಳ ಸಭೆ ಏಕೆ ನಡೆಸುತ್ತಿಲ್ಲ. ಆಗಾಗ್ಗೆ ಸಭೆ ನಡೆಸಿದ್ದರೆ ಎಲ್ಲಾ ಮಾಹಿತಿ ಲಭ್ಯವಿರುತ್ತಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮತದಾರರ ಗುರುತಿನ ಚೀಟಿ ವಿತರಣೆಯಲ್ಲಿ ವಿಳಂಬ ಮಾಡುತ್ತಿರುವುದರಿಂದ ಅನೇಕ ಸಮಸ್ಯೆ ಉಂಟಾಗುತ್ತಿವೆ. ಗುರುತಿನ ಚೀಟಿಗಳು ಆಗಾಗ್ಗೆ ವಿತರಣೆಯಾಗಬೇಕು. ನಕಲಿ ಮತದಾರರ ಚೀಟಿಗಳ ಬಗ್ಗೆ ಎಚ್ಚರ ವಹಿಸಬೇಕು. ಚುನಾವಣಾ ಆಯೋಗದವರು ಸಭೆ ನಡೆಸಿ ಮಾಹಿತಿ ಕೇಳುತ್ತಾರೆ. ಆಗ ಸಮರ್ಪಕ ಮಾಹಿತಿ ನೀಡದಿದ್ದರೆ ಹೇಗೆ? ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದರು.

ಗ್ರಹಚಾರ ಬಿಡಿಸುತ್ತೇನೆ: ‘ಹೊಸ ಮತದಾರರಿಗೆ ಸಂಬಂಧಿಸಿದಂತೆ ಮನೆ ಮನೆ ಭೇಟಿಗೂ ಮುನ್ನ ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೊಮಾ ಪರೀಕ್ಷೆಗೆ ಎಷ್ಟು ಮಂದಿ ಹಾಜರಾಗಿದ್ದಾರೆ ಎಂಬ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಪಡೆದುಕೊಂಡರೆ ಅಂದಾಜು ಸಂಖ್ಯೆ ಸಿಗುತ್ತದೆ’ ಎಂದು ಸಲಹೆ ನೀಡಿದರು.

‘ಇಷ್ಟೆಲ್ಲಾ ಸಲಹೆ ನೀಡಿದ ನಂತರವೂ ನಿರ್ಲಕ್ಷ್ಯ ತೋರಿದರೆ ಜಾಗರಣೆ ಇರಿಸಿ ಕೆಲಸ ಮಾಡಿಸುತ್ತೇನೆ. ನಾನೂ ಮನೆಗಳಿಗೆ ಭೇಟಿ ನೀಡಿ ಮತದಾರರ ಬಗ್ಗೆ ಮಾಹಿತಿ ಪಡೆಯುತ್ತೇನೆ. ಬಿಎಲ್‌ಒಗಳು ಮನೆ ಬಳಿ ಬಂದಿಲ್ಲ ಎಂದು ಗೊತ್ತಾದರೆ ಗ್ರಹಚಾರ ಬಿಡಿಸುತ್ತೇನೆ’ ಎಂದರು.

ಚುನಾವಣಾ ವೆಚ್ಚ ಮಾಹಿತಿ: ‘ವಿಧಾನಸಭಾ ಚುನಾವಣೆ ಮುಗಿದು ಮೂರು ತಿಂಗಳು ಕಳೆದಿದೆ. ಇನ್ನೂ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲವೆಂದರೆ ಅರ್ಥವೇನು? ಆ.10ರೊಳಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಚುನಾವಣಾ ಆಯೋಗವು ಈಗಾಗಲೇ ದಿನಾಂಕ ನಿಗದಿಪಡಿಸಿದ್ದು, ಆ ಗಡುವಿನೊಳಗೆ ಮಾಹಿತಿ ಒದಗಿಸದಿದ್ದರೆ ನೋಟಿಸ್ ನೀಡುತ್ತೇನೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಚುನಾವಣಾ ಶಾಖೆ ಸಿಬ್ಬಂದಿ ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಬರುವ ಮಾಹಿತಿಯನ್ನು ಮೂಟೆ ಕಟ್ಟಿ ಬಿಸಾಡಿಸದರೆ ಮುಲಾಜಿಲ್ಲದೆ ಮನೆಗೆ ಕಳುಹಿಸುತ್ತೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.

ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !