ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿ

7
ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಡಿಡಿಪಿಐ ರತ್ನಯ್ಯ ಕಿವಿಮಾತು

ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿ

Published:
Updated:
Deccan Herald

ಕೋಲಾರ: ‘ಶಿಕ್ಷಕರು ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವ ಬೆಳೆಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

ವಿಷಯ ಶಿಕ್ಷಕರಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ತರಗತಿಯ ಎಲ್ಲಾ ಪಠ್ಯ ವಿಷಯಗಳ ವರ್ಕ್‌ಶೀಟ್‌ ಸಿದ್ಧಪಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಪ್ರಶ್ನೆಪತ್ರಿಕೆಗಳನ್ನು ದೋಷರಹಿತವಾಗಿರುವಂತೆ ಸಿದ್ಧಪಡಿಸಬೇಕು. ಪ್ರತಿ ವರ್ಷ ಪ್ರಶ್ನೆಪತ್ರಿಕೆಯಲ್ಲಿ ಲೋಪದೋಷಗಳಾಗಿ ಮಕ್ಕಳಿಗೆ ಗ್ರೇಸ್ ಅಂಕ ನೀಡುವ ಪರಿಪಾಠ ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

‘ಉತ್ತಮ ಬೋಧಕರಾಗಲು ಮತ್ತು ಮೌಲ್ಯಮಾಪಕರಾಗಲು ಗೊಂದಲಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕು. ಮನೆಯ ಸಮಸ್ಯೆಗಳನ್ನು ಮನೆಯಲ್ಲೇ ಬಿಟ್ಟು ಶಾಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಬದ್ಧತೆಯಿಂದ ಕಾರ್ಯ ನಿರ್ವಹಿಸಿ’ ಎಂದು ಸಲಹೆ ನೀಡಿದರು.

‘ಬೋಧನಾ ಪ್ರಕ್ರಿಯೆಯಲ್ಲಿನ ಗೊಂದಲಗಳ ನಿವಾರಣೆಗೆ ಮತ್ತು ಪ್ರಶ್ನೆಪತ್ರಿಕೆಯನ್ನು ವೈವಿಧ್ಯಮಯವಾಗಿ ಸಿದ್ಧಪಡಿಸುವ ವಿಧಾನ ಕುರಿತು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಈಗಾಗಲೇ ತರಬೇತಿ ನೀಡಿದ್ದಾರೆ. ನೀವು ನೀಡುವ ವರ್ಕ್‌ಶೀಟ್‌ ರಾಜ್ಯ ಮಟ್ಟಕ್ಕೆ ಹೋಗುವುದರಿಂದ ತಪ್ಪುಗಳು ಆಗದಂತೆ ಎಚ್ಚರ ವಹಿಸಿ’ ಎಂದು ತಿಳಿಸಿದರು.

ಸ್ವಮೌಲ್ಯಮಾಪನ ಶಕ್ತಿ: ‘ಶಿಕ್ಷಕರು ಮಕ್ಕಳಿಗೆ ಪ್ರಶ್ನೆ ಕೇಳುವುದಕ್ಕೆ ತರಗತಿ ಸೀಮಿತವಾಗಬಾರದು. ವಿದ್ಯಾರ್ಥಿಗಳಿಗೆ ತಮ್ಮ ಗೊಂದಲಗಳ ಬಗ್ಗೆ ಧೈರ್ಯದಿಂದ ಪ್ರಶ್ನೆ ಕೇಳಿ ಶಿಕ್ಷಕರಿಂದ ಉತ್ತರ ಪಡೆಯುವ ಅವಕಾಶ ಕಲ್ಪಿಸಬೇಕು. ಮೌಲ್ಯಮಾಪನ ಪ್ರಕ್ರಿಯೆಯು ಪ್ರಶ್ನೆಗಳನ್ನು ನೀಡಿ ಉತ್ತರ ಪಡೆಯುವುದಲ್ಲ. ಮಕ್ಕಳಿಗೆ ಸ್ವಮೌಲ್ಯಮಾಪನದ ಶಕ್ತಿ ತುಂಬಬೇಕು. ಪಠ್ಯಪುಸ್ತಕ ಓದುವ ಅಭ್ಯಾಸ ಬಲಗೊಳಿಸಿದರೆ ಮಕ್ಕಳು ಉತ್ತಮ ಅಂಕ ಗಳಿಸುತ್ತಾರೆ’ ಎಂದರು.

ಇಂಗ್ಲಿಷ್‌ ಪಠ್ಯ ಬೋಧಿಸುವಾಗ ಅದೇ ಭಾಷೆಯಲ್ಲಿ ಮಾತನಾಡಬೇಕು. ಹಿಂದಿ ಬೋಧಿಸುವಾಗ ಹಿಂದಿ ಭಾಷೆಯಲ್ಲಿ ಮಾತನಾಡಬೇಕು. ಈ ವಿಷಯದಲ್ಲಿ ರಾಜಿ ಬೇಡ. ಮಕ್ಕಳಲ್ಲಿ ಭಾಷಾ ಕಲಿಕೆ ಅತಿ ಮುಖ್ಯ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಒಂದು ತಾಸು ಕಡ್ಡಾಯವಾಗಿ ವಿಶೇಷ ತರಗತಿ ನಡೆಸುವ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಿಸಿ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ವಿಷಯ ಪರಿವೀಕ್ಷಕರಾದ ಪಿ.ವಿ.ಗಾಯಿತಿ, ಕೃಷ್ಣಪ್ಪ, ನರಸಿಂಹರೆಡ್ಡಿ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !