ಲಕ್ಷ್ಮಿಸಾಗರ: ಕಲೆಯೇ ಈ ಊರಿನ ಜೀವಾಳ

7
ಸಾತಂತ್ರ್ಯ ಹೋರಾಟಕ್ಕೂ ಕೊಡುಗೆ, ವಿದೇಶಕ್ಕೂ ಹೋಗಿಬಂದ ಜನಪದ ಕಲಾವಿದರು

ಲಕ್ಷ್ಮಿಸಾಗರ: ಕಲೆಯೇ ಈ ಊರಿನ ಜೀವಾಳ

Published:
Updated:
Deccan Herald

ಪಾಂಡವಪುರ: ಕೂಗಳತೆ ದೂರದಲ್ಲಿ ಐತಿಹಾಸಿಕ ತೊಣ್ಣೂರು ಕೆರೆ, ಸಮೀಪದಲ್ಲೇ ಬೆಟ್ಟದ ಸಾಲುಗಳು, ಸುತ್ತಲೂ ಕಬ್ಬು, ಭತ್ತದ ಗದ್ದೆ ಬಯಲು, ತೆಂಗಿನ ತೋಟ, ತರಕಾರಿ, ಹೂವಿನ ಪರಿಮಳ. ಎಲ್ಲಕ್ಕಿಂತ ಹೆಚ್ಚಾಗಿ ಇದು ಜಾನಪದ ಕಲೆಗಳ ತವರು, ಲಕ್ಷ್ಮಿಸಾಗರ.

ಲಕ್ಷ್ಮಿಸಾಗರ ಎಂದೊಡನೆ ‘ಕಲೆಯ ತವರೂರು–ಸೋಬಾನೆಯ ಹಿರಿಯೂರು’ ಎಂದು ಕರೆಸಿಕೊಳ್ಳುತ್ತದೆ. ಸ್ವಾತಂತ್ರ್ಯ ಚಳವಳಿಗೂ ಈ ಗ್ರಾಮ ತನ್ನದೇ ಆದ ಕೊಡುಗೆ ನೀಡಿದೆ. ಗ್ರಾಮದ ಪಟೇಲ ಚಿಕ್ಕಪುಟ್ಟೇಗೌಡರ ನೇತೃತ್ವದಲ್ಲಿ ಅವರ ಸಹೋದರರಾದ ಶ್ರೀಕಂಠೇಗೌಡ, ದೇವಿಚಲುವೇಗೌಡ, ಮೊಗಣ್ಣೇಗೌಡ ಹಾಗೂ ಊರಿನ ಇತರರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈಗಲೂ ಈ ಮನೆತನದ ಕುಟುಂಬದವರು ಆಗಸ್ಟ್‌ 15ರಂದು ತಮ್ಮ ಮನೆಗಳ ಮುಂದೆ ರಾಷ್ಟ್ರಧ್ವಜಾರೋಹಣ ಮಾಡಿ, ಸಿಹಿಹಂಚಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ.

ಈ ಊರಿನೊಳಗೆ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ನೂರು ವರ್ಷ ಪೂರೈಸಿರುವ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ಈ ಶಾಲೆಗೆ ತನ್ನದೇ ಆದ ಇತಿಹಾಸವಿದೆ. ಊರೊಳಗಿನ ರಂಗ ಸ್ಥಳದಲ್ಲಿ ಐತಿಹಾಸಿಕ ಮೂರು ದೇವಸ್ಥಾನಗಳಿವೆ. ತುಂಬ ಹಳೆಯದಾದ ಗರುಡಗಂಭ ಕಾಣಸಿಗುತ್ತದೆ. ಈ ಸ್ಥಳದಲ್ಲಿ ಊರಿನ ಕಾರ್ಯಕ್ರಮಗಳು ಹಾಗೂ ಊರಿನ ನ್ಯಾಯಪಂಚಾಯ್ತಿ ನಡೆಯುತ್ತದೆ. ನ್ಯಾಯಪಂಚಾಯ್ತಿಯ ತೀರ್ಮಾನಕ್ಕೆ ಸಾಕ್ಷಿಪ್ರಜ್ಞೆಯಂತಿದೆ ಇಲ್ಲಿನ ಗರುಡಗಂಭ.

ಊರಿನ ಹೊರ ವಲಯದ ತೊಣ್ಣೂರು ಕೆರೆ ಬಳಿ ನಿಕುಂಬಿಣಿದೇವಿ ದೇವಸ್ಥಾನವಿದೆ. ಇದು ಲಕ್ಷ್ಮಿಸಾಗರ ಗ್ರಾಮದ ಗ್ರಾಮ ದೇವತೆಯಾಗಿದೆ. ಲಂಕಾಧೀಶ್ವರ ರಾವಣನ ಕುಲದೇವತೆ ನಿಕುಂಬಿಣಿ ದೇವಿ ಇಲ್ಲಿ ನೆಲೆಯೂರಿರುವುದಕ್ಕೆ ಪುರಾಣ ಪ್ರಸಿದ್ಧ ಕತೆಗಳಿವೆ. 20 ವರ್ಷಗಳಿಗೊಮ್ಮೆ ಇಲ್ಲಿ ಗ್ರಾಮದ ಜನತೆ ಅದ್ಧೂರಿಯಾಗಿ ಹಬ್ಬ ಆಚರಿಸುತ್ತಾರೆ. ಪ್ರತಿ ದೀಪಾವಳಿಯಲ್ಲಿ ಲಕ್ಷ್ಮಿಸಾಗರ ಗ್ರಾಮದ ಜನತೆ ಮಹದೇಶ್ವರ ಜಾತ್ರಾಮಹೋತ್ಸವನ್ನು ಸಡಗರದಿಂದ ಆಚರಿಸುತ್ತಾರೆ. ಜಾನಪದ ಕಲಾತಂಡಗಳೊಂದಿಗೆ ಹುಲಿವಾಹನೋತ್ಸವ ನಡೆಯುತ್ತದೆ.

ಸೋಬಾನೆ ಕಲೆಯಲ್ಲಿ ಪ್ರಸಿದ್ಧಿಯಾಗಿದ್ದ ಸೋಬಾನೆ ಕೃಷ್ಣೇಗೌಡ ಅವರನ್ನು ಈ ಗ್ರಾಮದ ಜನತೆ ಸದಾ ನೆನೆಪಿಸಿಕೊಳ್ಳುತ್ತಾರೆ. ಸೋಬಾನೆ ಪದ, ಕೋಲಾಟ ಹಾಗೂ ಕೊರವಂಜಿ ಹೇಳುವುದು ಕೃಷ್ಣೇಗೌಡರಿಗೆ ಕರಗತ ಆಗಿತ್ತು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಕೃಷ್ಣೇಗೌಡರ ತಂಡವು 1998ರಲ್ಲಿ ದಕ್ಷಿಣ ಅಮೆರಿಕಾ ಪ್ರವಾಸ ಕೈಗೊಂಡಿತ್ತು. ಅಮೆರಿಕಾದ ಹಲವೆಡೆ ಸೋಬಾನೆ ಗೀತಾ ಗಾಯನ ನಡೆಸಿತು.

ಕೃಷ್ಣೇಗೌಡರ ಅತ್ತಿಗೆ ಕಲ್ಯಾಣಮ್ಮ ಸೋಬಾನೆ ಪದಗಳನ್ನು ಹಾಡುತ್ತ ಪರಂಪರೆಯನ್ನು ಮುಂದುವರಿಸಿದ್ದಾರೆ. ಸೋಬಾನೆ ಪದವೇ ಜೀವಾಳ ಎಂದುಕೊಂಡಿರುವ ಪುಟ್ಟಚನ್ನಮ್ಮ, ಜಯಮ್ಮ, ಚನ್ನಮ್ಮ, ಕೆಂಚಮ್ಮ, ನಾಗಮ್ಮ, ಮಂಗಮ್ಮ, ಭದ್ರಮ್ಮ, ಹನುಮಮ್ಮ ಸೋಬಾನೆಗೆ ಹೊಸ ರೂಪ ಕೊಟ್ಟಿದ್ದಾರೆ. ಕೋಲಾಟದ ಮಾಸ್ಟರ್‌ ಎಂದೇ ಹೆಸರು ಪಡೆದಿರುವ ಶಿವಣ್ಣೇಗೌಡ ಅವರು ‘ನಂಬಿ ನಾರಾಯಯಣಸ್ವಾಮಿ ಕೋಲಾಟದ ತಂಡ’ವನ್ನು ಕಟ್ಟಿ ಈ ಕಲೆ ಉಳಿಸಿ ಬೆಳೆಸಿದ್ದಾರೆ.

ಸೋಬಾನೆ ಕೃಷ್ಣೇಗೌಡರು ನಡೆಸಿಕೊಂಡು ಬಂದಿದ್ದ ಗಾರುಡಿಗೊಂಬೆ ಕಲೆಯನ್ನು ಅವರ ಮಗ ರಾಜೇಶ್‌ ಮುಂದುವರಿಸಿಕೊಂಡು ಬರುತ್ತಿದ್ದಾರೆ. ತಮಟೆಯ ತಾಳಕ್ಕೆ ಹೆಜ್ಜೆ ಹಾಕಿ ರಂಗದ ಕುಣಿತಕ್ಕೆ ಮೆರಗು ನೀಡುತ್ತಿರುವ ಹಿರಗೇಗೌಡರ ಕೃಷ್ಣೇಗೌಡರು 5 ದಶಕಗಳಿಂದ ಈ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ. ಹೊಸ ತಲೆಮಾರಿಗೆ ಕುಣಿತವನ್ನು ಕಲಿಸಿಕೊಟ್ಟಿದ್ದಾರೆ.

ಜನಪದ ನೃತ್ಯ ಪ್ರಕಾರಗಳಲ್ಲಿ ಡೊಳ್ಳು ಕುಣಿತವು ‘ರುದ್ರ ನರ್ತನದ ಗಂಡು ಕಲೆ’ ಎಂದೇ ಪ್ರಸಿದ್ಧಿ ಪಡೆದಿದೆ. ಈ ಡೊಳ್ಳುಕುಣಿತವನ್ನು ಕರಗತಮಾಡಿಕೊಂಡಿರುವ ಎಲ್.ಸಿ.ಚಂದ್ರು ಅವರು ತಮ್ಮ ತಂಡದೊಂದಿಗೆ ಅಹಮದಾಬಾದ್‌, ಒಡಿಶಾ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಕೇರಳ, ದಿಲ್ಲಿ, ಆಂಧ್ರಪ್ರದೇಶಗಳಲ್ಲದೆ ವಿದೇಶಗಳಲ್ಲೂ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಕ್ಷ್ಮಿಸಾಗರ ಗ್ರಾಮದಲ್ಲಿ ರಂಗಭೂಮಿ ಕಲಾವಿದರಿಗಂತೂ ಬರವೇ ಇಲ್ಲ. ಈ ಊರಿಗೆ ಕಲೆಯೇ ಜೀವಾಳವಾಗಿದ್ದು ಜಿಲ್ಲೆಯ ಭೂಪಟದಲ್ಲಿ ವಿಶೇಷ ಸ್ಥಾನ ಪಡೆದಿದೆ.
 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !