ಉಕ್ಕಿ ಹರಿಯುತ್ತಿರುವ ಭದ್ರಾ ನದಿ; ಭದ್ರಾವತಿ ಹೊಸ ಸೇತುವೆ ಸಂಚಾರ ಬಂದ್

7

ಉಕ್ಕಿ ಹರಿಯುತ್ತಿರುವ ಭದ್ರಾ ನದಿ; ಭದ್ರಾವತಿ ಹೊಸ ಸೇತುವೆ ಸಂಚಾರ ಬಂದ್

Published:
Updated:
Deccan Herald

ಭದ್ರಾವತಿ: ಭದ್ರಾ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಭದ್ರಾನದಿ ತುಂಬಿ ಹರಿಯುತ್ತಿದ್ದು, ಹೊಸ ಸೇತುವೆ ರಸ್ತೆಯಲ್ಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಗುರುವಾರ ಮಧ್ಯಾಹ್ನ ವೇಳೆಗೆ ಜಲಾಶಯದ ಹೊರಹರಿವು ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಹೊಸ ಸೇತುವೆ ರಸ್ತೆಯಲ್ಲಿನ ಸಂಚಾರವನ್ನು ಸ್ಥಗಿತ ಮಾಡಿತು.

ಇದರಿಂದಾಗಿ ಬಿ.ಎಚ್. ರಸ್ತೆ, ಸಿ.ಎನ್. ರಸ್ತೆಯಲ್ಲಿ ಸಂಚಾರ ಹೆಚ್ಚಾದ ಪರಿಣಾಮ ಹಳೇ ಸೇತುವೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಮಾರು ಒಂದೂವರೆ ಗಂಟೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

ಹೆಚ್ಚಿದ ಹರಿವು: ಜಲಾಶಯದಿಂದ ಹೊರ ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾದಂತೆ ಹೊಸ ಸೇತುವೆ ರಸ್ತೆ ಮೇಲೆ ನದಿಯ ಹರಿವು ಆರಂಭವಾಗುವ ಸೂಚನೆ ಕಂಡು ಬರುತ್ತಿದ್ದು, ಅದನ್ನು ನೋಡಲು ಜನಸಾಗರವೇ ಜಮಾಯಿಸಿದೆ.

ರಸ್ತೆಯ ಎರಡೂ ಮಗ್ಗಲುಗಳಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್‌ ಮಾಡಿದೆ. ಸಹಸ್ರಾರು ಜನರು ನದಿಯ ರಭಸವನ್ನು ನೋಡಲು ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಐದು ವರ್ಷಗಳ ಹಿಂದೆ ಭದ್ರೆಯ ಅಬ್ಬರಕ್ಕೆ ಹೊಸ ಸೇತುವೆ ರಸ್ತೆ ಮೇಲಿನ ಸಂಚಾರವನ್ನು ಮೂರು ದಿನಗಳ ನಿಷೇಧಿಸಲಾಗಿತ್ತು. ಆದಾದ ನಂತರ ಕಳೆದ ವಾರ ಒಂದು ದಿನ ಸಂಚಾರ ಬಂದ್ ಮಾಡಿದ್ದನ್ನು ಬಿಟ್ಟರೆ ಈಗಲೇ ಬಂದ್ ಮಾಡುತ್ತಿರುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.

ಜಲಾಶಯದಿಂದ ಸುಮಾರು 60,000 ಕ್ಯುಸೆಕ್‌ ನೀರು ಹೊರ ಬರುತ್ತಿರುವ ಕಾರಣ ನೀರಿನ ಅಬ್ಬರ ನಿರಂತರವಾಗಿ ಮುಂದುವರೆಯಲಿದ್ದು, ನದಿ ಪಾತ್ರದ ಜನರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಗರಸಭೆ, ತಾಲ್ಲೂಕು ಆಡಳಿತ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !